ಬೆಳಗಾವಿ: ಲಾಕ್‌ಡೌನ್ ತೆರವಾಗಿದ್ದು, ಜಿಲ್ಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯುಕೆಆರ್‌ಟಿಸಿ) ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದಿಂದ ಬಸ್‌ಗಳ ಕಾರ್ಯಾಚರಣೆ ಪ್ರಾರಂಭವಾಗಿದೆ.
ಲಾಕ್‌ಡೌನ್ ಅವಧಿಯಲ್ಲಿ ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣಗಳಲ್ಲಿ ಲವಲವಿಕೆ ಕಂಡುಬಂತು.
‘ಕೋವಿಡ್ -19 ಹರಡುವಿಕೆ ತಡೆಗಟ್ಟಲು ಸರ್ಕಾರವು ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶೇ 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್‌ಗಳನ್ನು ಕಾರ್ಯಾಚರಣೆ ನಡೆಸಲು ಅನುಮತಿ ನೀಡಿದೆ. ಆದ್ದರಿಂದ, ಬೆಳಗಾವಿ ವಿಭಾಗದಿಂದ ಮೈಸೂರು ಜಿಲ್ಲೆ ಹೊರತುಪಡಿಸಿ ಇತರ ಕಡೆಗಳಿಗೆ ಬಸ್‌ಗಳ ಓಡಾಟ ಆರಂಭಿಸಲಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ತಿಳಿಸಿದರು.
‘ಬೆಳಗಾವಿಯಿಂದ ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ರಾಮದುರ್ಗ, ಬೈಲಹೊಂಗಲ, ಗೋಕಾಕ, ವಿಜಯಪುರ, ಚಿಕ್ಕೋಡಿ, ನಿಪ್ಪಾಣಿ, ಖಾನಾಪುರ ಮೊದಲಾದ ಕಡೆಗಳಿಗೆ ಪ್ರಯಾಣಿಕರ ದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಸ್ಥಳೀಯ ಮತ್ತು ದೂರ ಮಾರ್ಗದ ಅಂತರ ಜಿಲ್ಲಾ ಸಾರಿಗೆಗಳ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ’ ಎಂದು ಹೇಳಿದರು.
‘ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಪ್ರಯಾಣಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರರಾಜ್ಯ ಮಾರ್ಗಗಳ ಕಾರ್ಯಾಚರಣೆಯ ಬಗ್ಗೆ ಆಯಾ ರಾಜ್ಯಗಳ ಮಾರ್ಗಸೂಚಿಗಳ ಅನ್ವಯ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು’ ಎಂದು ಮಾಹಿತಿ ನೀಡಿದರು.
ನಗರ ಸಾರಿಗೆ ಬಸ್‌ಗಳ ಕಾರ್ಯಾಚರಣೆಯೂ ಪುನರಾರಂಭಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.