ಬೆಳಗಾವಿ: ಕಾಂಬೋಡಿಯಾ, ಮಾಲ್ಡೊವಾ, ನೇಪಾಳ, ಸಿಷೆಲ್ ಹಾಗೂ ಟ್ಯುನೇಷಿಯಾ ದೇಶಗಳ ಚುನಾವಣಾ ಆಯೋಗಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳು ಸೋಮವಾರ ಬೆಳಗಾವಿಗೆ ಬಂದು, ಲೋಕಸಭಾ ಚುನಾವಣೆ ಸಿದ್ಧತೆಯನ್ನು ಕುತೂಹಲದಿಂದ ವೀಕ್ಷಿಸಿದರು.
ಇಲ್ಲಿನ ವನಿತಾ ವಿದ್ಯಾಲಯದಲ್ಲಿ ಸ್ಥಾಪಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ವಿದೇಶಿ ಪ್ರತಿನಿಧಿಗಳ ತಂಡಕ್ಕೆ ಮತಗಟ್ಟೆ ಸಿಬ್ಬಂದಿ ನಿಯೋಜನೆ, ಸ್ಟ್ರಾಂಗ್‌ರೂಮ್, ವಿದ್ಯುನ್ಮಾನ ಮತಯಂತ್ರಗಳ ವಿತರಣೆ, ಸಾರಿಗೆ ವ್ಯವಸ್ಥೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದರು.
ನಂತರ ಮಾದರಿ ನೀತಿಸಂಹಿತೆ ಕೇಂದ್ರ, ವಾರ್ತಾ ಭವನದಲ್ಲಿ ಸ್ಥಾಪಿಸಿದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಕೇಂದ್ರಕ್ಕೂ ತಂಡ ಭೇಟಿ ನೀಡಿತು. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಜತೆ ಸಂವಾದ ನಡೆಸಿದರು. ತಮ್ಮ ದೇಶದ ಮತ್ತು ಭಾರತದ ಚುನಾವಣೆ ವ್ಯವಸ್ಥೆಗಿರುವ ವ್ಯತ್ಯಾಸದ ಕುರಿತು ಮಾತನಾಡಿದರು.
‘ಭಾರತದಲ್ಲಿ ಚುನಾವಣೆ ಪ್ರಕ್ರಿಯೆ ಶಿಸ್ತುಬದ್ಧವಾಗಿ ನಡೆಯುತ್ತದೆ. ಸಿಬ್ಬಂದಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ. ಇಲ್ಲಿ ಅನುಸರಿಸುವ ವಿಧಾನದಿಂದ ಚುನಾವಣೆ ವೆಚ್ಚ ತಗ್ಗಿಸಬಹುದು. ಭಾರತ ಮತ್ತು ನೇಪಾಳದಲ್ಲಿ ನಡೆಯುವ ಚುನಾವಣೆಗೆ ಸಾಮ್ಯತೆಯಿದೆ. ಭಾರತೀಯರು ಚುನಾವಣೆ ಮೇಲಿಟ್ಟ ವಿಶ್ವಾಸ ಕಂಡು ಖುಷಿಯಾಗಿದೆ’ ಎಂದು ನೇಪಾಳದ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಥಾನೇಶ್ವರ ಬುಸಾಲ್ ತಿಳಿಸಿದರು.
ಕಾಂಬೋಡಿಯಾದ ರಾಷ್ಟ್ರೀಯ ಚುನಾವಣಾ ಮಂಡಳಿ ಸದಸ್ಯ ಹೆಲ್.ಸರಾಥ್, ಕಾಂಬೋಡಿಯಾದ ರಾಷ್ಟ್ರೀಯ ಚುನಾವಣಾ ಮಂಡಳಿ ಮುಖ್ಯ ಕಾರ್ಯದರ್ಶಿ ಹೌಟ್ ಬೋರಿನ್, ಮೊಲ್ಡೊವಾದ ಕೇಂದ್ರ ಚುನಾವಣಾ ಆಯೋಗದ ಸದಸ್ಯೆ ಡಾನಾ ಮಂಟೇನುವಾ, ಮೊಲ್ಡೊವಾದ ಕೇಂದ್ರ ಚುನಾವಣಾ ಆಯೋಗದ ಸ್ಥಳೀಯ ಜಿಲ್ಲಾ ಚುನಾವಣಾ ಪರಿಷತ್ ಮುಖ್ಯಸ್ಥ ಆ್ಯಡ್ರಿಯನ್ ಗಮರ್ತಾ ಎಸಾನು, ನೇಪಾಳದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ದಿನೇಶ್ ಕುಮಾರ್ ಥಾಪಾಲಿಯಾ, ಸಿಷೆಲ್‌ನ ಚುನಾವಣಾ ಆಯೋಗದ ಮುಖ್ಯಸ್ಥ ಡ್ಯಾನಿ ಸಿಲ್ವಾ ಲುಕಾಸ್, ಸಿಷೆಲ್‌ನ ಚುನಾವಣಾ ಆಯೋಗದ ಆಯುಕ್ತ ನೊರ್ಲಿಸ್ ನಿಕೋಲಸ್ ರೋಸ್ ಹೋರೌ, ತುನಿಷಿಯಾದ ಎಲೆಕ್ಷನ್ ಹೈಕಮಿಷನ್‌ನ ಮಾನಸ್ರೀ ಮೊಹ್ಮದ್ ತ್ಲಿಲಿ, ತುನಿಷಿಯಾದ ಎಲೆಕ್ಷನ್ ಹೈಕಮಿಷನ್‌ನ ಪ್ರಾದೇಶಿಕ ನಿರ್ದೇಶಕ ಜೆಲ್ಲಾಲಿ ನಬೀಲ್ ಈ ತಂಡದಲ್ಲಿದ್ದಾರೆ.
ಮಂಗಳವಾರ (ಮೇ 7) ಜಿಲ್ಲೆಯ ವಿವಿಧ ಮತಗಟ್ಟೆಗಳಿಗೂ ತೆರಳಿ, ಅವರು ಚುನಾವಣೆ ವ್ಯವಸ್ಥೆ ಅಧ್ಯಯನ ಮಾಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.