ADVERTISEMENT

ಖಾನಾಪುರ: ವೃದ್ಧೆಗೆ ನ್ಯುಮೋನಿಯಾ- ಜಿಲ್ಲಾಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 15:16 IST
Last Updated 24 ಜನವರಿ 2023, 15:16 IST
ಖಾನಾಪುರದ ಕಾಡಿನಲ್ಲಿ ಪತ್ತೆಯಾದ ಅಜ್ಜಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಖಾನಾಪುರದ ಕಾಡಿನಲ್ಲಿ ಪತ್ತೆಯಾದ ಅಜ್ಜಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಾವಗಾ ಹೊರವಲಯದ ಅರಣ್ಯದಲ್ಲಿ ಸೋಮವಾರ ಪತ್ತೆಯಾದ 90 ವರ್ಷದ ವೃದ್ಧೆ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

‘ತೀವ್ರ ನಿತ್ರಾಣಗೊಂಡ ಅಜ್ಜಿ ಸರಿಯಾಗಿ ಮಾತನಾಡುವಷ್ಟು ಚೇತರಿಸಿಕೊಂಡಿಲ್ಲ. ತನ್ನ ಹೆಸರು ಅಂಬವ್ವ ಕಾಟಗಾರಿ, ಊರಿನ ಹೆಸರು ಉಗರಖೋಡ ಎಂದಷ್ಟೇ ಹೇಳಿದ್ದಾರೆ. ಅವರ ಗುರುತು ಪತ್ತೆಗೆ ಯತ್ನ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಾಲ್ಕೈದು ದಿನಗಳಿಂದ ಅನ್ನ–ನೀರು ಸೇವಿಸದೇ ಚಳಿಯಲ್ಲಿ ಬಿದ್ದಿದ್ದರಿಂದ ಅಜ್ಜಿ ದೇಹ ಕ್ಷೀಣಿಸಿದೆ. ನ್ಯುಮೋನಿಯಾ ಅಂಟಿಕೊಂಡ ಕಾರಣ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದರು.

ADVERTISEMENT

‘ಜಿಲ್ಲಾಸ್ಪತ್ರೆಗೆ ತೆರಳಿ ವೃದ್ಧೆ ಆರೋಗ್ಯ ವಿಚಾರಿಸಲಾಗಿದೆ. ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ನಾಮದೇವ ಬಿಲ್ಕಾರ ಅವರು ಖುದ್ದು ಭೇಟಿ ನೀಡಿದ್ದಾರೆ. ವೃದ್ಧೆಯ ಆರೋಗ್ಯ ಸುಧಾರಿಸಿದ ನಂತರ, ಇಲಾಖೆಯ ವೃದ್ಧಾಶ್ರಮಕ್ಕೆ ಸೇರಿಸಲಾಗುವುದು. ಅವರ ಸಂಬಂಧಿಕರ ಪತ್ತೆಗೆ ಪ್ರಯತ್ನ ಮಾಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎ.ಎಂ.ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.