ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ನಗರದ ಮತಗಟ್ಟೆಯೊಂದರ ಮತಪೆಟ್ಟಿಗೆಯಲ್ಲಿ ಒಂದು ಮತ ಕಡಿಮೆ ಬಂದಿದ್ದು, ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಪದವೀಧರ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಚುನಾವಣಾ ಸಿಬ್ಬಂದಿ ಮುಂದೆ ತಕರಾರು ತೆಗೆದರು.
ನಿಪ್ಪಾಣಿಯ ಮತಗಟ್ಟೆಯಲ್ಲಿ 595 ಮತದಾನವಾಗಿದೆ. ಆದರೆ, ಅಲ್ಲಿಂದ ತಂದ ಮತಪೆಟ್ಟಿಗೆಯಲ್ಲಿ 594 ಮತಗಳು ಇವೆ. ಸಿಬ್ಬಂದಿ ನಾಲ್ಕು ಬಾರಿ ಎಣಿಕೆ ಮಾಡಿದರೂ ಸಂಖ್ಯೆ ಸರಿಹೊಂದಲಿಲ್ಲ. ಇದರಿಂದ ಏಜೆಂಟರು ಏರುದನಿಯಲ್ಲಿ ತಕರಾರು ಮಾಡಿದರು. ಮತಎಣಿಕೆಗೆ ಕೆಲ ಸಮಯ ತಡೆ ಬಿದ್ದಿತು.
*
ಮತಪೆಟ್ಟಿಗೆ ಮೇಲಿನ ಬಟ್ಟೆ ವ್ಯತ್ಯಾಸ:
ವಾಯವ್ಯ ಶಿಕ್ಷಕರ ಕ್ಷೇತ್ರದ ಮತದ ಮತ ಪೆಟಿಗೆಯೊಂದಕ್ಕೆ ಕಟ್ಟಿದ್ದ ಬಟ್ಟೆ ಬದಲಾಗಿದ್ದರಿಂದ ಜೆಡಿಎಸ್ ಅಭ್ಯರ್ಥಿ ಪರ ಏಜೆಂಟರು ತಕರಾರು ಮಾಡಿದರು.
ಶೀಲ್ ಮಾಡುವಾಗ ಒಂದು ಬಣ್ಣದ ಬಟ್ಟೆ ಇತ್ತು. ಅದನ್ನು ತೆರೆಯುವಾಗ ಇನ್ನೊಂದು ಬಣ್ಣದ್ದು ಇದೆ. ಇದಕ್ಕೆ ಕಾರಣ ಏನು ಎಂದು ಚುನಾವಣಾಧಿಕಾರಿ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಬಂದ ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್, 'ಬಟ್ಟೆ ಕಟ್ಟುವುದಷ್ಟೇ ಶೀಲ್ ಅಲ್ಲ. ಅದರ ಒಳಗೆ ಬ್ಯಾಲೆಟ್ ಪೇಪರ್ ಮೇಲೆ ಶೀಲ್ ಇರುತ್ತದೆ. ಇದನ್ನು ವ್ಯತ್ಯಾಸ ಮಾಡಲು ಸಾಧ್ಯವಿಲ್ಲ. ನೀವೇ ನೋಡಿ ಎಂದು ತೋರಿಸಿದರು. ಬಳಿಕ ಏಜೆಂಟರು ಶಾಂತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.