ADVERTISEMENT

ಬೇಸರವಾಗಿ ರಾಜೀನಾಮೆ ನೀಡಿದ್ದೆ; ಅವಿಶ್ವಾಸವಿಲ್ಲ: ರಮೇಶ ಕತ್ತಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:29 IST
Last Updated 5 ಅಕ್ಟೋಬರ್ 2024, 15:29 IST
ರಮೇಶ್ ಕತ್ತಿ
ರಮೇಶ್ ಕತ್ತಿ   

ಹುಕ್ಕೇರಿ: ‘ಬಿಡಿಸಿಸಿ ಬ್ಯಾಂಕನ್ನು ನಾನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದ್ದೇನೆ. ಕಳೆದ ಬಾರಿ ಡಿಸಿಸಿ ಬ್ಯಾಂಕ್‌ ₹30.56 ಕೋಟಿ ಲಾಭ ಗಳಿಸಿದೆ. ರೈತರು, ಗ್ರಾಹಕರ ಹಿತವನ್ನೂ ಕಾಪಾಡಿದ್ದೇನೆ. ನನಗೇ ಬೇಸರವಾಗಿ ರಾಜೀನಾಮೆ ನೀಡಿದ್ದೇವೆ ಹೊರತು; ಯಾರೂ ಅವಿಶ್ವಾಸ ನಿರ್ಣಯಕ್ಕೆ ಸಿದ್ಧರಾಗಿಲ್ಲ’ ಎಂದು ಬ್ಯಾಂಕಿನ ನಿರ್ಗಮಿತ ಅಧ್ಯಕ್ಷ ರಮೇಶ ಕತ್ತಿ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಸದಸ್ಯರ ಸಂಖ್ಯೆ ಹೆಚ್ಚಳದಲ್ಲಿ ಮೂಡಿದ ಗೊಂದಲದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಬ್ಯಾಂಕಿಗೆ 16 ನಿರ್ದೇಶಕರಿದ್ದಾರೆ. ಇಲ್ಲಿಯವರೆಗೆ 10 ತಾಲ್ಲೂಕು ಇದ್ದವು. ಈಗ ತಾಲ್ಲೂಕು ಸಂಖ್ಯೆ 15ಕ್ಕೆ ಏರಿದೆ. ಹಾಗಾಗಿ ವಿವಿಧ ಕ್ಷೇತ್ರಗಳ 6 ನಿರ್ದೇಶಕರ ಆಯ್ಕೆಯ ದೃಷ್ಟಿಯಿಂದ ನಿಪ್ಪಾಣಿ ಸೇರಿ ಹೊಸ ತಾಲ್ಲೂಕಿನಲ್ಲಿ ಹೊಸ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಕಳೆದ ನಾಲ್ಕು ತಿಂಗಳಿಂದ ಒತ್ತಾಯ ನಡೆದಿತ್ತು. ಇದರಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ರಾಜೀನಾಮೆ ನೀಡಿದ್ದೇನೆ’ ಎಂದರು.

‘ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದರೂ ಕೆಲವು ಸದಸ್ಯರು ಸಾಲ ಮರುಪಾವತಿ ಮಾಡಿಲ್ಲ. ಕಟಬಾಕಿ ಮೊತ್ತ₹50 ಕೋಟಿ ಇದೆ. ಎನ್.ಪಿ.ಎ 2.66ರಷ್ಟು ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಬ್ಯಾಂಕಿನಲ್ಲಿ ಎಲ್ಲ ಪಕ್ಷದ ನಿರ್ದೇಶಕರು ಇದ್ದಾರೆ. ಇಲ್ಲಿ ಯಾವುದೇ ರಾಜಕೀಯ ಪ್ರಶ್ನೆಯೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖಂಡರಾದ ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ರಾಚಯ್ಯ ಹಿರೇಮಠ, ರವಿ ಹಿಡ್ಕಲ್, ಪವನ್ ಕತ್ತಿ, ಪ್ರಥ್ವಿ ಕತ್ತಿ ಇದ್ದರು.

ಸಾಧನೆ ಬಿಚ್ಚಿಟ್ಟ ರಮೇಶ ಕತ್ತಿ
‘ನಾನು 1999ರಲ್ಲಿ ಅಧಿಕಾರ ಪಡೆದಾಗ ಬ್ಯಾಂಕು ₹28.60 ಕೋಟಿ ಷೇರು ಬಂಡವಾಳ ಹೊಂದಿತ್ತು. 2024ರ ಮಾರ್ಚ್ ಅಂತ್ಯಕ್ಕೆ ₹273.66 ಕೋಟಿ ಇದೆ. ₹369.28 ಕೋಟಿ ಇದ್ದ ಠೇವಣಿ ಈಗ ₹5797.29 ಕೋಟಿ ಇದೆ. ದುಡಿಯುವ ಬಂಡವಾಳ ₹577.83 ಕೋಟಿಯಿಂದ ₹7894.96 ಕೋಟಿಗೆ ಏರಿದೆ. ಆಗ ₹442.15 ಕೋಟಿ ಸಾಲ ನೀಡಲಾಗಿತ್ತು. ಈಗ ₹5230.74 ಕೋಟಿ ನೀಡಿದ್ದೇವೆ. ಆಡಳಿತಾತ್ಮಕ ವೆಚ್ಚ ಶೇ 3.23ರಿಂದ ಶೇ 1.71ರಷ್ಟು ಕಡಿಮೆಯಾಗಿದೆ’ ಎಂದು ಅವರು ಸಾಧನೆ ಬಿಚ್ಚಿಟ್ಟರು. 3.28 ಲಕ್ಷ ರೈತರಿಗೆ ₹3100 ಕೋಟಿ ಲಾಭವಾಗಿದೆ. ಹುಕ್ಕೇರಿ ತಾಲ್ಲೂಕಿನ ಸುಮಾರು 38 ಸಾವಿರ ರೈತರಿಗೆ ₹310 ಕೋಟಿ ಸಾಲಮನ್ನಾ ಆಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.