ADVERTISEMENT

ಪದ್ಮಶ್ರೀಗೆ ಭಾಜನವಾದ ಬಾಳೇಶ ಎಂ.ಕೆ. ಹುಬ್ಬಳ್ಳಿಯವರು

ಕನ್ನಡದ ಪ್ರತಿಭೆ, ಸದ್ಯ ತಮಿಳುನಾಡಿನಲ್ಲಿ ವಾಸ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 12:56 IST
Last Updated 26 ಜನವರಿ 2022, 12:56 IST
ಬಾಳೇಶ ಭಜಂತ್ರಿ
ಬಾಳೇಶ ಭಜಂತ್ರಿ   

ಎಂ.ಕೆ. ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಶಹನಾಯಿ ವಾದನ ಮತ್ತು ಗಾಯನದ ಮೂಲಕ ದೇಶ-ವಿದೇಶಗಳಲ್ಲಿ ಕೀರ್ತಿ ಗಳಿಸಿ, 2022ನೇ ಸಾಲಿನ ‘ಪದ್ಮಶ್ರೀ’ ಪುರಸ್ಕಾರಕ್ಕೆ ಭಾಜನವಾಗಿರುವ ಪಂಡಿತ ಬಾಳಪ್ಪ (ಬಾಳೇಶ) ಸಣ್ಣಭರಮಪ್ಪ ಭಜಂತ್ರಿ ಮೂಲತಃ ಬೆಳಗಾವಿ ಜಿಲ್ಲೆಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದವರು. 40 ವರ್ಷಗಳಿಂದ ಅವರು ತಮಿಳುನಾಡಿನಲ್ಲಿ ನೆಲೆಸಿದ್ದಾರೆ.

ಎಂ.ಕೆ.ಹುಬ್ಬಳ್ಳಿಯ ಸಣ್ಣಭರಮಪ್ಪ–ಯಲ್ಲಮ್ಮ ದಂಪತಿ ಪುತ್ರ. ಕಿತ್ತೂರು ನಾಡಿನ ಹೆಸರು ಬೆಳೆಗಿಸಿದ ಅವರ ಸಾಧನೆಗೆ ಇಲ್ಲಿನ ಜನರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

64 ವರ್ಷದ ಬಾಳಪ್ಪ ತಮ್ಮ ಪ್ರತಿಭೆ ಮೂಲಕ ಹೆಸರು ಗಳಿಸಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿ ಹೆಚ್ಚಿನ ಸಾಧನೆಗಾಗಿ ಬೇರೆ ರಾಜ್ಯಕ್ಕೆ ತೆರಳಿದರು. ಪತ್ನಿ ಹಾಗೂ ಮೂವರು ಪುತ್ರರೊಂದಿಗೆ ಚೆನ್ನೈನಲ್ಲಿ ವಾಸವಿದ್ದಾರೆ. ಕುಟುಂಬದವರೆಲ್ಲ ಸಂಗೀತ ಕ್ಷೇತ್ರದಲ್ಲೇ ತೊಡಗಿರುವುದು ವಿಶೇಷ.

ADVERTISEMENT

ತಂದೆ ಸಣ್ಣಭರಮಪ್ಪ ಹಾಗೂ ದೊಡ್ಡಪ್ಪ ದೊಡ್ಡಭರಮಣ್ಣ ಅವರಿಂದ ಸಂಗೀತದ ಸೆಳೆತಕ್ಕೆ ಒಳಗಾದ ಬಾಳಪ್ಪ, ಇಲ್ಲಿ ನಡೆಯುತ್ತಿದ್ದ ಮದುವೆ, ಧಾರ್ಮಿಕ ಕಾರ್ಯಗಳಲ್ಲಿ ಶಹನಾಯಿ ವಾದನಕ್ಕೆ ಸಾಥ್ ನೀಡುತಿದ್ದರು. ಗ್ರಾಮದ ನಂದೀಕೇಶ್ವರ ದೇವಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿಕೊಡುತಿದ್ದ ಶಿಕ್ಷಕ ದಿವಂಗತ ಡಿ.ಪಿ. ಹಿರೇಮಠ ಅವರ ಬಳಿ ಹಲವು ವರ್ಷಗಳವರೆಗೆ ಸಂಗೀತ ಕಲಿತಿದ್ದರು. ಕೋದಂಡ ಸಾಳವಂಕಿ ಗುರು, ಪಂಡಿತ ಪುಟ್ಟರಾಜ ಗವಾಯಿ ಹಾಗೂ ಉಸ್ತಾದ್‌ ಬಿಸ್ಮಿಲ್ಲಾ ಖಾನ್ ಅವರ ಬಳಿಯೂ ಅಭ್ಯಾಸ ಮಾಡಿದ್ದಾರೆ.

ಐದು ದಶಕಗಳಿಂದ 50ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಶಹನಾಯಿ ಸಂಯೋಜನೆ ನೀಡಿದ್ದಾರೆ. ವಿವಿಧ ಭಾಷೆಗಳ ಭಕ್ತಿಗೀತೆಗಳಿಗೆ ನುಡಿಸಿದ್ದಾರೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು ಸೇರಿ ಹಲವು ಭಾಷೆಗಳ ಹಾಡುಗಳಿಗೆ ಶಹನಾಯಿ ದನಿಗೂಡಿಸಿದ್ದಾರೆ.

ಸಂಗೀತ ನಿರ್ದೇಶಕರಾದ ಹಂಸಲೇಖ, ರಾಜನ್ ನಾಗೇಂದ್ರ, ಉಪೇಂದ್ರ ಕುಮಾರ್‌, ಅರ್ಜುನ್ ಜನ್ಯ, ಇಳಯರಾಜ, ಎ.ಆರ್. ರೆಹಮಾನ್ ಸೇರಿ ಹಲವರ ಗೀತೆಗಳಿಗೆ ಶಹನಾಯಿ ವಾದನ ನೀಡಿದ್ದಾರೆ. ದೇಶದ ಹಲವೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಗೀತ ಸುಧೆ ಹರಿಸಿದ್ದಾರೆ. ವಿದೇಶಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಎಂ.ಕೆ. ಹುಬ್ಬಳಿಯ ತವಗದ ಮಠ ಹಾಗೂ ಕಾದ್ರೋಳ್ಳಿಯ ಶ್ರೀಮಠಗಳ ಬಗ್ಗೆ ಭಕ್ತಿ ಹೊಂದಿದ್ದು ಇಲ್ಲೂ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಮನೆಯಲ್ಲಿ ಕನ್ನಡ ಭಾಷೆಯಲ್ಲೆ ಮಾತನಾಡುತ್ತಾರೆ.

‘ಗ್ರಾಮೀಣ ಪ್ರದೇಶ ಎಂ.ಕೆ. ಹುಬ್ಬಳ್ಳಿಯಲ್ಲಿ ಹುಟ್ಟಿ-ಬೆಳೆದ ನನಗೆ ಸಂಗೀತ ಶಾರದೆ ಆಶೀರ್ವದಿಸಿದ್ದಾಳೆ. ಹಿಂದೂಸ್ತಾನಿ ಶಹನಾಯಿ ವಾದನ ಮತ್ತು ಗಾಯನದ ಮೂಲಕ ಸಂಗೀತ ಸೇವೆ ಮಾಡುತ್ತಿರುವ ನನಗೆ ಪದ್ಮಶ್ರೀ ಪುರಸ್ಕಾರ ಸಿಗುವ ನಿರೀಕ್ಷೆ ಇರಲಿಲ್ಲ. ಸಾಧನೆಯನ್ನು ಹುಡುಕಿ ಸರ್ಕಾರ ಪುರಸ್ಕಾರ ಕೊಟ್ಟಿದ್ದು ಖುಷಿ ನೀಡಿದೆ’ ಎಂದು ಬಾಳೇಶ ಪ್ರತಿಕ್ರಿಯಿಸಿದರು.

‘ತಮಿಳುನಾಡು ಸರ್ಕಾರ ಗೌರವ ಡಾಕ್ಟರೇಟ್ ನೀಡಿದೆ. ವಿದೇಶಗಳಿಂದಲೂ ಸಾಕಷ್ಟು ಪ್ರಶಸ್ತಿಗಳು ಸಂಗೀತ ಸೇವೆಗೆ ಒಲಿದು ಬಂದಿವೆ’ ಎಂದು ತಿಳಿಸಿದರು.

‘ಶಹನಾಯಿ ವಾದಕರೊಬ್ಬರಿಗೆ ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಪದ್ಮಶ್ರೀ ಸಿಕ್ಕಿರುವುದು ಹೆಗ್ಗಳಿಕೆ’ ಎಂದು ಪುತ್ರ ಕೃಷ್ಣ ಭಜಂತ್ರಿ ಹೇಳಿದರು.

‘ಬಾಳಪ್ಪ ಅವರು ನಮ್ಮೂರಿನ ಕೀರ್ತಿಯನ್ನು ದೇಶ-ವಿದೇಶದ ಮಟ್ಟದಲ್ಲಿ ಬೆಳಗಿಸಿ, ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಭಾಜನವಾಗಿರುವುದು ಹೆಮ್ಮೆಯ ಸಂಗತಿ’ ಎಂದು ನಿವಾಸಿ ಚಿನ್ನಪ್ಪ ಮುತ್ನಾಳ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.