ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಿರೇಬುದನೂರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹಾರುಗೊಪ್ಪದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಬೆಂಗಳೂರಿನ ‘ಕನ್ನಡ ಮನಸುಗಳು ಕರ್ನಾಟಕ’ ತಂಡದ ಸದಸ್ಯರು ಬಣ್ಣ ಬಳಿದು, ಹೊಸ ರೂಪ ನೀಡಿದ್ದಾರೆ.
ಬಣ್ಣ ಹಚ್ಚಿದರೆ ಸಾಲದು, ಆವರಣ ವಿಶಿಷ್ಟವಾಗಿಸಲು ಶಾಲಾ ತರಗತಿ ಕೊಠಡಿಯ ಗೋಡೆಗಳ ಮೇಲೆ ಮಹಾನ್ ನಾಯಕರು, ಪ್ರಾಣಿ–ಪಕ್ಷಿಗಳ ಚಿತ್ರಗಳನ್ನು ರಚಿಸಿದ್ದಾರೆ. ನಲಿ–ಕಲಿ ತರಗತಿಗೆ ಪೂರಕ ಚಿತ್ರಗಳನ್ನು ಬಿಡಿಸಿದ್ದಾರೆ.
1918ರಲ್ಲಿ ಸ್ಥಾಪಿತ ಹಿರೇಬುದನೂರ ಸರ್ಕಾರಿ ಶಾಲೆ ಮತ್ತು 1909ರಲ್ಲಿ ಸ್ಥಾಪಿತ ಹಾರುಗೊಪ್ಪದ ಸರ್ಕಾರಿ ಶಾಲೆ 8 ವರ್ಷಗಳಿಂದ ಬಣ್ಣ ಕಂಡಿರಲಿಲ್ಲ. ಇದಕ್ಕೆ ಅನುದಾನವೂ ಇರಲಿಲ್ಲ.
‘ವಿವಿಧ ವೃತ್ತಿಗಳಲ್ಲಿ ಇರುವ ಸಮಾನ ಮನಸ್ಕರು ಸೇರಿ ‘ಕನ್ನಡ ಮನಸುಗಳು ಕರ್ನಾಟಕ’ ತಂಡ ಕಟ್ಟಿಕೊಂಡಿದ್ದೇವೆ. ನಾವು ಮತ್ತು ವಿವಿಧ ದಾನಿಗಳ ನೆರವಿನಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ₹2.5 ಲಕ್ಷ ವೆಚ್ಚದಲ್ಲಿ ಎರಡೂ ಶಾಲೆಗಳಿಗೆ ಬಣ್ಣ ಬಳಿದಿದ್ದೇವೆ’ ಎಂದು ತಂಡದ ಸಂಸ್ಥಾಪಕ ಅಧ್ಯಕ್ಷ ಪವನ ದರೇಗುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘2017ರಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಕೈಗೊಂಡಿದ್ದೇವೆ. ಬೆಳಗಾವಿ, ಹಾವೇರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈವರೆಗೆ 52 ಶಾಲೆಗಳಿಗೆ ಬಣ್ಣ ಬಳಿದಿದ್ದೇವೆ’ ಎಂದರು.
‘ನಾನು ಕಲಿತ ಹಿರೇಬುದನೂರಿನ ಶಾಲೆ ಬಣ್ಣ ಕಾಣದ್ದನ್ನು ಕಂಡು ಬೇಸರವಾಗಿತ್ತು. ಅದಕ್ಕೆ ‘ಕನ್ನಡ ಮನಸುಗಳು ಕರ್ನಾಟಕ’ ತಂಡ ಸಂಪರ್ಕಿಸಿದೆ. ಹಲವು ಸ್ವಯಂಸೇವಕರು ಆಗಸ್ಟ್ 24 ಮತ್ತು 25ರಂದು ಇಡೀ ಶಾಲೆಗೆ ಬಣ್ಣ ಬಳಿದರು’ ಎಂದು ಹಳೇ ವಿದ್ಯಾರ್ಥಿ ಉಮೇಶ್ವರ ಮರಗಾಲ ತಿಳಿಸಿದರು.
‘ತರಗತಿಗಳು, ಕಚೇರಿ, ಅಡುಗೆ ಕೋಣೆ ಸೇರಿ ಹಿರೇಬುದನೂರ ಇಡೀ ಶಾಲೆಗೆ ಬಣ್ಣ ಬಳಿಯಲಾಗಿದೆ. ಸರ್ಕಾರದ ಕೆಲಸವನ್ನು ಒಂದು ತಂಡದವರು ಮಾಡಿದ್ದು ಖುಷಿ ತಂದಿದೆ’ ಎಂದು ಹಿರೇಬುದನೂರ ಶಾಲೆ ಮುಖ್ಯಶಿಕ್ಷಕಿ ಎಂ.ಐ.ಮಲ್ಲಾಡಿ, ಶಿಕ್ಷಕ ಬಸಲಿಂಗಪ್ಪ ವಾರಿ ಹೇಳಿದರು.
‘12 ಕೊಠಡಿ ಸೇರಿದಂತೆ ಇಡೀ ಶಾಲೆಗೆ ಬಣ್ಣ ಬಳಿದು, ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿದ ಈ ತಂಡದ ಕಾರ್ಯ ಶ್ಲಾಘನೀಯ’ ಎಂದು ಹಾರೂಗೊಪ್ಪದ ಶಾಲೆಯ ಶಿಕ್ಷಕ ನಿಂಗಪ್ಪ ಕುಂಟಮಾಯನ್ನವರ ಹೇಳಿದರು.
ಎರಡು ಶಾಲೆಗಳಿಗೆ ಬಣ್ಣ ಬಳಿದು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈಜೋಡಿಸಿದ ತಂಡಕ್ಕೆ ಕೃತಜ್ಞತೆ ಸಲ್ಲಿಸುವೆ. ಎಲ್ಲರೂ ಸರ್ಕಾರಿ ಶಾಲೆ ಉಳಿಸಿ ಬೆಳೆಸಲು ನೆರವಾಗಬೇಕುಮೋಹನ ದಂಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಸವದತ್ತಿ
ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಮತ್ತು ಸೌಲಭ್ಯ ಕಲ್ಪಿಸಬೇಕು ಎಂಬ ಉದ್ದೇಶ ನಮ್ಮದುಪವನ ದರೇಗುಂಡಿ ಸಂಸ್ಥಾಪಕ ಕನ್ನಡ ಮನಸುಗಳು ಕರ್ನಾಟಕ ತಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.