ಬೆಳಗಾವಿ: ರಸ್ತೆ ಸಾರಿಗೆ ನಿಗಮದ ಈ ಬಸ್‌ನಲ್ಲಿ ಪ್ರಯಾಣಿಸುವವರು ಕುಡಿಯುವ ನೀರಿನ ಬಾಟಲಿ, ಬೆಡ್‌ಶೀಟ್ ಹಾಗೂ ಹೊದಿಕೆ ದೊರೆಯದೇ ಇರುವುದರಿಂದ ತೊಂದರೆ ಅನುಭವಿಸಬೇಕಾಗಿದೆ.
ಇಲ್ಲಿನ ಕೇಂದ್ರ ಬಸ್ ನಿಲ್ದಾಣದಿಂದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ (ನಾನ್ ಎಸಿ ಸ್ಲೀಪರ್) ನಿತ್ಯವೂ ರಾತ್ರಿ 9.30ಕ್ಕೆ ಹೊರಡುತ್ತದೆ. ಪ್ರಯಾಣಿಕರು ಮೈಸೂರು ತಲುಪಲು ಸತತ 12 ಗಂಟೆಗಳ ಪ್ರಯಾಣಿಸಬೇಕು. ರಾತ್ರಿ ಹೊರಟರೆ ಮರುದಿನ ಬೆಳಿಗ್ಗೆ 9.30ರ ಸುಮಾರಿಗೆ ಬಸ್ಸು ಮೈಸೂರು ನಿಲ್ದಾಣ ತಲುಪುತ್ತದೆ. ಶಿವಮೊಗ್ಗಕ್ಕೆ ಹೋಗುವವರೂ ಇರುತ್ತಾರೆ. ಆದರೆ, ದೀರ್ಘ ಅವಧಿಯ ಪ್ರಯಾಣದ ನಡುವೆ ನಿರ್ವಾಹಕರು ನೀರಿನ ಬಾಟಲಿ ಪೂರೈಸುವುದಿಲ್ಲ. ಇದರಿಂದಾಗಿ ಪ್ರಯಾಣಿಕರು ನೀರನ್ನು ತೆಗೆದುಕೊಂಡೇ ಬಸ್ ಏರಬೇಕಾದ ಅಥವಾ ಬಸ್ಸನ್ನು ವಿಶ್ರಾಂತಿಗಾಗಿ ಎಲ್ಲಿ ನಿಲ್ಲಿಸಲಾಗುತ್ತದೆಯೋ ಅಲ್ಲಿ ನೀರು ಖರೀದಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ನಿಯಮ ಪಾಲನೆ ಇಲ್ಲ:
ದೂರದ ಊರುಗಳಿಗೆ ಹೋಗುವ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಅರ್ಧ ಲೀಟರ್ ನೀರಿನ ಬಾಟಲಿ ಕೊಡಬೇಕು ಎನ್ನುವುದು ನಿಗಮದವರೇ ಮಾಡಿಕೊಂಡಿರುವ ನಿಯಮ. ಬಹುತೇಕ ಬಸ್‌ಗಳಲ್ಲಿ ಇದನ್ನು ಪಾಲಿಸಲಾಗುತ್ತಿದೆ. ಆದರೆ, ಬೆಳಗಾವಿ–ಮೈಸೂರಿನ ಈ ಬಸ್‌ನಲ್ಲಿ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯವಾದ ನೀರನ್ನು ಒದಗಿಸದಿರುವುದು ಅಚ್ಚರಿ ಮೂಡಿಸುತ್ತದೆ. ಹಲವು ತಿಂಗಳುಗಳಿಂದಲೂ ಇದೇ ರೀತಿ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಈ ವಿಷಯವಾಗಿ ನಿರ್ವಾಹಕರು–ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದ ಉದಾಹರಣೆಗಳೂ ಇವೆ.
ಪ್ರಯಾಣಿಕರಿಂದ ಬಂದ ದೂರು ಆಧರಿಸಿ ಪರಿಶೀಲನೆಗಾಗಿ, ‘ಪ್ರಜಾವಾಣಿ’ ಪ್ರತಿನಿಧಿ ಈಚೆಗೆ ಮೂರು ಬಾರಿ ಪ್ರಯಾಣಿಸಿದಾಗಲೂ ನೀರಿನ ಬಾಟಲಿ ಕೊಡಲಿಲ್ಲ. ಅಲ್ಲದೇ, ಬೆಡ್‌ಶೀಟ್ ಹಾಗೂ ಹೊದಿಕೆಯೂ ಲಭ್ಯವಿರಲಿಲ್ಲ. ಆದರೆ, ರಾತ್ರಿ 8.30ಕ್ಕೆ ಮೈಸೂರಿನಿಂದ ಬೆಳಗಾವಿಗೆ ಹೊರಡುವ ಬಸ್‌ನಲ್ಲಿ ಈ ಎಲ್ಲ ಸೌಲಭ್ಯವನ್ನೂ ನಿರ್ವಾಹಕರು ಕಲ್ಪಿಸಿದರು. ಒಂದು ಬಸ್‌ಗೊಂದು, ಇನ್ನೊಂದು ಬಸ್‌ಗೊಂದು ನಿಯಮವಿರುವುದು ಅಚ್ಚರಿ ಮೂಡಿಸಿತು.
ಪ್ರಯಾಣಿಕರೇ ಕಾರಣ:
‘ಹಿಂದೆ ನೀರಿನ ಬಾಟಲಿ ಕೊಡುತ್ತಿದ್ದೆವು. ಆದರೆ, ಬಹಳಷ್ಟು ಮಂದಿ ಹೆಚ್ಚುವರಿಯಾಗಿ ನೀರು ಕೇಳುತ್ತಿದ್ದರು. ಬಾಕ್ಸ್‌ನಲ್ಲಿ ಇಟ್ಟಿದ್ದನ್ನು ತೆಗೆದುಕೊಳ್ಳುತ್ತಿದ್ದರು. ಅವರನ್ನು ಪ್ರಶ್ನಿಸುವುದಕ್ಕೂ ಬರುತ್ತಿರಲಿಲ್ಲ. ಇದರಿಂದಾಗಿ ನಿಗಮಕ್ಕೆ ನಾವು ಲೆಕ್ಕ ಕೊಡುವುದು ಕಷ್ಟವಾಗುತ್ತಿತ್ತು. ಅಲ್ಲದೇ, ಕೈಯಿಂದ ಹಣ ಕಟ್ಟಬೇಕಾದ ಪರಿಸ್ಥಿತಿ ಬಂದಿತ್ತು. ಹೀಗಾಗಿ, ನೀರು ಕೊಡುತ್ತಿಲ್ಲ’ ಎಂದು ನಿರ್ವಾಹಕರು ಪ್ರತಿಕ್ರಿಯಿಸಿದರು.
‘ಹಾಗೆಯೇ, ಕೆಲವರು ಬೆಡ್‌ಶೀಟ್ ಹಾಗೂ ಹೊದಿಕೆಯನ್ನು ಕಳವು ಮಾಡಿಕೊಂಡು ಹೋದ ಉದಾಹರಣೆಗಳೂ ಇವೆ. ಎಲ್ಲ ಪ್ರಯಾಣಿಕರನ್ನೂ ನಿಲ್ಲಿಸಿ, ಬ್ಯಾಗ್‌ಗಳನ್ನು ಚೆಕ್ ಮಾಡುವುದಕ್ಕೆ ಬರುವುದಿಲ್ಲ. ಎಲ್ಲರನ್ನೂ ಅನುಮಾನದಿಂದ ನೋಡುವುದಕ್ಕೆ ಆಗುವುದಿಲ್ಲ. ಹೀಗಾಗಿ, ಬೆಡ್‌ಶೀಟ್ ಕೊಡುವುದನ್ನೂ ನಿಲ್ಲಿಸಿದ್ದೇವೆ. ಡಿಪೊನಲ್ಲಿ ಬೆಡ್‌ಶೀಟ್, ಹೊದಿಕೆಗಳ ಲೆಕ್ಕವನ್ನು ಕೊಡಬೇಕು. ಒಂದು ಕಡಿಮೆ ಇದ್ದರೂ ಅದಕ್ಕೆ ತಗಲುವ ಹಣ ನಾವು ತುಂಬಬೇಕಾಗುತ್ತದೆ. ಸಂಬಳವನ್ನೆಲ್ಲಾ ಇದಕ್ಕೇ ಕೊಟ್ಟರೆ ನನಗಾಗುವ ನಷ್ಟ ತುಂಬುವವರಾರು’ ಎಂದು ಪ್ರಶ್ನಿಸಿದರು.
‘ಬಸ್‌ನಲ್ಲಿ ಪ್ರಯಾಣಿಕರಿಗೆ ನಿಗದಿಪಡಿಸಿದ ನೀರಿನ ಬಾಟಲಿ ಕೊಡಲೇಬೇಕು. ಹೊದಿಕೆ, ಬೆಡ್‌ಶೀಟ್‌ಗಳು ಕಳೆದು ಹೋಗದಂತೆ ನೋಡಿಕೊಳ್ಳುವುದು ನಿರ್ವಾಹಕರ ಜವಾಬ್ದಾರಿ. ಯಾರೋ ಕಳವು ಮಾಡಿದರೆಂದು ಕೊಡುವುದನ್ನೇ ನಿಲ್ಲಿಸಿದ್ದೇವೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಡಿಪೊ ವ್ಯವಸ್ಥಾಪಕರಲ್ಲಿ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ನಿಗಮದ ವಿಭಾಗೀಯ ನಿಯಂತ್ರಕ ಮಹಾದೇವಪ್ಪ ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.