ಬೆಳಗಾವಿ: ಕನ್ನಡ ಅನುಷ್ಟಾನದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ತಾಲ್ಲೂಕಿನ ಹಿಂಡಲಗಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಎಂಇಎಸ್ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಮುಖಂಡ ಮನೋಹರ ಕಿಣೇಕರ ಮಾತನಾಡಿ, ‘ಹಿಂಡಲಗಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಸಂತಕುಮಾರಿ ಅವರು ಗ್ರಾಮದ ಮರಾಠಿ ಭಾಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಮರಾಠಿ ಭಾಷೆಯಲ್ಲಿ ಪತ್ರ ವ್ಯವಹಾರ ನಡೆಸಿದ್ದಾರೆ. ಒತ್ತಡ ಹಾಗೂ ಅನಿವಾರ್ಯ ಪರಿಸ್ಥಿತಿ ಇದಕ್ಕೆ ಕಾರಣವಾಗಿರಬಹುದು. ಹೀಗಾಗಿ, ಅಧಿಕಾರಿಗೆ ಎಚ್ಚರಿಕೆ ನೀಡಿ, ಅಮಾನತು ಆದೇಶ ಹಿಂಪಡೆಯಬೇಕು’ ಎಂದು ಮನವಿ ಮಾಡಿದರು.
ಗ್ರಾಮಸ್ಥ ಗಂಗಾದರ ಗಸಾರಿ ಮಾತನಾಡಿ, ‘ಜಿಲ್ಲಾಧಿಕಾರಿ ಅವರ ಆದೇಶದಿಂದ ಗ್ರಾಮದ ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯೆ ಭಾಷಾ ವೈಷಮ್ಯ ಏರ್ಪಡುವ ಸಾಧ್ಯತೆ ಇದೆ. ಹೀಗಾಗಿ, ಆದೇಶವನ್ನು ಹಿಂಪಡೆಯಬೇಕು. ಅಧಿಕಾರಿಗೆ ಮುಂದೆ ಹೀಗಾಗದಂತೆ ಎಚ್ಚರಿಕೆ ನೀಡಿ, ಪಂಚಾಯ್ತಿಯಲ್ಲೇ ಕಾರ್ಯನಿರ್ವಹಿಸಲು ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಪಾಟೀಲ, ಎಂಇಎಸ್ ಮುಖಂಡರಾದ ರಾಜಾಬಾವು ಪಾಟೀಲ, ಪ್ರವೀಣ ಪಾಟೀಲ,ಗ್ರಾಮಸ್ಥರಾದ ಸಾತವ್ವ ಸೂರ್ಯವಂಶಿ, ಮಲ್ಲಪ್ಪ ಪಾಟೀಲ, ಹೇಮಂತ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.