ADVERTISEMENT

ಖಾನಾಪುರ: ನಿಯಮ ಉಲ್ಲಂಘಿಸಿ ‘ಪ್ರಭಾರಿ’ ನೇಮಕ

ಖಾನಾಪುರ ತಾಲ್ಲೂಕಿನ 8 ಗ್ರಾಮ ಪಂಚಾಯಿತಿಗಳಲ್ಲಿ ಗ್ರೇಡ್-2 ಕಾರ್ಯದರ್ಶಿಗಳಿಗೆ ಪಿಡಿಒ ಹುದ್ದೆ

ಪ್ರಸನ್ನ ಕುಲಕರ್ಣಿ
Published 1 ಜುಲೈ 2024, 8:25 IST
Last Updated 1 ಜುಲೈ 2024, 8:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಖಾನಾಪುರ: ತಾಲ್ಲೂಕಿನ 8 ಗ್ರಾಮ ಪಂಚಾಯಿತಿಗಳಲ್ಲಿ ಗ್ರೇಡ್–2 ಕಾರ್ಯದರ್ಶಿಗಳಿಗೆ ಪಿಡಿಒ ಹುದ್ದೆಯ ಪ್ರಭಾರ ವಹಿಸಿಕೊಡಲಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ನಿರೀಕ್ಷಿತವಾಗಿ ನಡೆಯುತ್ತಿಲ್ಲ ಎಂಬ ದೂರು ಜನರಿಂದ ಕೇಳಿಬಂದಿದೆ.

ತಾಲ್ಲೂಕಿನಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಪಿಡಿಒಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ 12 ಪಿಡಿಒಗಳಿಗೆ ತಲಾ ಎರಡು ಗ್ರಾಮ ಪಂಚಾಯಿತಿಗಳ ನಿರ್ವಹಣೆ ಹೊಣೆ ವಹಿಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಪಿಡಿಒಗಳು ಲಭ್ಯವಿದ್ದರೂ ಅವರಿಗೆ ಪಂಚಾಯಿತಿಗಳನ್ನು ಹಂಚಿಕೊಡುವುದನ್ನು ಬಿಟ್ಟು; ಕಾರ್ಯದರ್ಶಿಗಳಿಗೆ ಪಿಡಿಒ ಹುದ್ದೆಯ ಪ್ರಭಾರ ವಹಿಸಿಸಲಾಗಿದೆ. ಈ ಮೂಲಕ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರೇ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬುದು ಜನರ ದೂರು.

ADVERTISEMENT

ಬಿಜಗರ್ಣಿ, ಹಲಸಿ, ದೇವಲತ್ತಿ, ಗೋಧೊಳ್ಳಿ, ಇದ್ದಲಹೊಂಡ, ತೋಪಿನಕಟ್ಟಿ, ಲೋಂಡಾ ಮತ್ತಿತರ ಗ್ರಾಮ ಪಂಚಾಯಿತಿಗಳಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

‘ಗ್ರೇಡ್-1 ಪಂಚಾಯಿತಿ ಕಾರ್ಯದರ್ಶಿಗೆ ಪಿಡಿಒ ಹುದ್ದೆಯ ಅಧಿಕಾರ ನೀಡಬಹುದು. ಇಲ್ಲದಿದ್ದರೆ ನೆರೆಯ ಪಂಚಾಯಿತಿಯ ಪಿಡಿಒಗೆ ಪ್ರಭಾರಿ ಕೊಡಬಹುದು. ಆದರೆ, ಗ್ರೇಡ್-2 ಕಾರ್ಯದರ್ಶಿಗಳಿಗೆ ಪಿಡಿಒ ಚಾರ್ಜ್ ನೀಡುವಂತಿಲ್ಲ ಎಂಬುದು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯಸೂಚಿ’ ಎನ್ನುತ್ತಾರೆ ಜನ.

‘ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರಿಣಾಮಕಾರಿ ಹಾಗೂ ಪಾರದರ್ಶಕ ಆಡಳಿತ ನಡೆಸಬೇಕೆನ್ನುವ ಉದ್ದೇಶದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆ ಸೃಷ್ಟಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪದವಿ ಹೊಂದಿದ, ಕಂಪ್ಯೂಟರ್ ಜ್ಞಾನವಿರುವವರು ಇದಕ್ಕೆ ಅರ್ಹರು. ಪ್ರಭಾರಿ ಹುದ್ದೆ ಕೊಡುವಾಗಲೂ ಇದೆಲ್ಲ ಪರಿಗಣಸಿಬೇಕಾಗಿತ್ತು’ ಎನ್ನುತ್ತಾರೆ ಗಡಿನಾಡು ಹಿತರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಖಾತೇದಾರ.

‘ಜನಪ್ರತಿನಿಧಿಗಳನ್ನು ಓಲೈಸುವ ಸಲುವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ರೀತಿ ನಿಯೋಜನೆ ಮಾಡಿದ್ದರೆ. ಇಲ್ಲದಿದ್ದರೆ ಯಾವ ನಿಯಮ ಆಧರಿಸಿ ಗ್ರೇಡ್‌–2 ಕಾರ್ಯದರ್ಶಿಗಳಿಗೆ ಪ್ರಭಾರಿ ನೀಡಲಾಗಿದೆ ಎಂಬುದನ್ನು ಜಿಲ್ಲಾ ಪಂಚಾಯಿತಿ ಸಿಇಒ ಸ್ಪಷ್ಟಪಡಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ವಿಠ್ಠಲ ಹಿಂಡಲಕರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.