ಬೆಳಗಾವಿ: ಭಾನುವಾರ (ಅ. 25) ನಡೆಯಲಿರುವ ಆಯುಧಪೂಜೆ ಹಾಗೂ ಸೋಮವಾರ (ಅ. 26) ಆಚರಿಸಲಾಗುವ ವಿಜಯದಶಮಿ ಹಬ್ಬಗಳ ಅಂಗವಾಗಿ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಕೋವಿಡ್–19 ಭೀತಿಯ ನಡುವೆಯೂ ಇಲ್ಲಿನ ಮಾರುಕಟ್ಟೆ ಪ್ರದೇಶಗಳಲ್ಲಿ ಮುಗಿಬಿದ್ದರು.
ಆಯುಧಪೂಜೆಯಂದು ಮನೆಗಳಲ್ಲಿ ವಾಹನಗಳಿಗೆ ಹಾಗೂ ಆಯುಧಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಇದಲ್ಲದೇ, ಅಂಗಡಿಗಳು, ಕಚೇರಿಗಳು, ಕಾರ್ಖಾನೆಗಳು, ಕೈಗಾರಿಕಾ ಘಟಕಗಳು, ಮುದ್ರಣಾಲಯಗಳು ಮೊದಲಾದ ಕೆಲಸದ ಸ್ಥಳಗಳಲ್ಲಿ ಪೂಜೆಗಾಗಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಹೀಗಾಗಿ, ಮುನ್ನಾ ದಿನವಾದ ಶನಿವಾರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಅಗತ್ಯವಾದ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಅಂತರವನ್ನೂ ಮರೆತು ಮುಗಿಬಿದ್ದಿದ್ದು ಕಂಡುಬಂತು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಜನರು ಪೂಜೆಗೆ ಬೇಕಾಗುವಂತಹ ಫಲ–ಪುಷ್ಪ ಮೊದಲಾದ ಸಾಮಗ್ರಿಗಳ ಖರೀದಿಸಿದರು. ಹೂವು, ಹಣ್ಣುಗಳ ಮಾರಾಟ ಜೋರಾಗಿ ನಡೆಯಿತು.
ಗಾಂಧಿ ನಗರದ ಹೂವಿನ ಮಾರುಕಟ್ಟೆ, ಗಣಪತಿ ಗಲ್ಲಿ, ಖಡೇಬಜಾರ್, ಶನಿವಾರ ಕೂಟ್, ರವಿವಾರ ಪೇಟೆ, ಮಾರುತಿ ಗಲ್ಲಿಯಲ್ಲಿ ಭಾರಿ ಜನದಟ್ಟಣೆ ಕಂಡುಬಂತು. ಈ ಹಬ್ಬದಲ್ಲಿ ಪ್ರಮುಖವಾಗಿ ಬೇಡಿಕೆ ಇರುವ ಚೆಂಡು ಹೂವು ಮೊಳವೊಂದಕ್ಕೆ ₹ 50ರಿಂದ ₹60 ಇತ್ತು. ಕಬ್ಬಿನ ಜೊಲ್ಲೆಯೊಂದಕ್ಕೆ ₹5 ರಿಂದ ₹ 10 ಇತ್ತು. ನಾಲ್ಕೈದು ಕಬ್ಬುಗಳನ್ನು ತೆಗೆದುಕೊಂಡರೆ ವ್ಯಾಪಾರಿಗಳು ಸರಾಸರಿ ₹ 50ರಿಂದ ₹ 80 ಬೆಲೆ ಹೇಳುತ್ತಿದ್ದರು. ಬಾಳೆ ಕಂದು ಜೋಡಿಗೆ ₹ 60ರಿಂದ ₹ 80 ಇತ್ತು. ನಗರದ ಅಲ್ಲಲ್ಲಿ ರಸ್ತೆ ಬದಿಯಲ್ಲಿ ರಕಬ್ಬು ಹಾಗೂ ಬಾಳೆ ಕಂದುಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ಕೆಲವು ಬಟ್ಟೆ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಬಟ್ಟೆಗಳನ್ನು ಮಾರಲಾಗುತ್ತಿದೆ. ಹಲವರು ಕುಟುಂಬ ಸಮೇತ ಬಂದು ಹೊಸ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದುದು ಕಂಡುಬಂತು.
ನವರಾತ್ರಿ ಅಂಗವಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ನಡೆಯುತ್ತಿರುವ ದುರ್ಗಾ ಮಾತಾ ದೌಡ್ ಹಾಗೂ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾಮಾತಾ ಪೂಜೆ ಕಾರ್ಯಕ್ರಮಗಳಿಗೆ ವಿಜಯದಶಮಿಯಂದು ತೆರೆ ಬೀಳಲಿದೆ. ಸೋಮವಾರ ವಿವಿಧ ದೇವಸ್ಥಾನಗಳ ರಥಗಳ ಮೆರವಣಿಗೆ ನಡೆಯಲಿದೆ. ‘ವಿಜಯ ದಶಮಿ’ಯಂದು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿಯನ್ನು ವಿನಿಮಯ ಮಾಡಿಕೊಳ್ಳುವುದು ಇಲ್ಲಿನ ಆಚರಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.