ADVERTISEMENT

ಪೆಟ್ರೋಲ್, ಡೀಸೆಲ್‌ ತೆರಿಗೆ ಹೆಚ್ಚಳ: ಎತ್ತುಗಳ ಬಳಸಿ ಸ್ಕೂಟರ್ ಎಳೆದು BJP ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 11:13 IST
Last Updated 17 ಜೂನ್ 2024, 11:13 IST
<div class="paragraphs"><p>ಪೆಟ್ರೋಲ್‌, ಡೀಸೆಲ್‌ ತೆರಿಗೆ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬೆಳಗಾವಿಯಲ್ಲಿ ಸೋಮವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಎತ್ತುಗಳಿಗೆ ಬೈಕ್‌–ಸ್ಕೂಟರ್‌ಗಳನ್ನು ಕಟ್ಟಿ ಎಳೆಯುವ ಮೂಲಕ ಆಕ್ರೋಶ ಹೊರಹಾಕಿದರು </p></div>

ಪೆಟ್ರೋಲ್‌, ಡೀಸೆಲ್‌ ತೆರಿಗೆ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬೆಳಗಾವಿಯಲ್ಲಿ ಸೋಮವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಎತ್ತುಗಳಿಗೆ ಬೈಕ್‌–ಸ್ಕೂಟರ್‌ಗಳನ್ನು ಕಟ್ಟಿ ಎಳೆಯುವ ಮೂಲಕ ಆಕ್ರೋಶ ಹೊರಹಾಕಿದರು

   

– ಪ್ರಜಾವಾಣಿ ಚಿತ್ರ

ಬೆಳಗಾವಿ: ಇಂಧನ ತೈಲಗಳ ತೆರಿಗೆ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ನಗರದಲ್ಲಿ ಸೋಮವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು. ಎತ್ತುಗಳಿಗೆ ಬೈಕ್‌–ಸ್ಕೂಟರ್‌ಗಳನ್ನು ಕಟ್ಟಿ ಎಳೆಯುವ ಮೂಲಕ ಆಕ್ರೋಶ ಹೊರಹಾಕಿದರು.

ADVERTISEMENT

ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ ಬೈಕುಗಳನ್ನು ತಳ್ಳಿಕೊಂಡು ಹೋಗುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ಕೆಲಕಾಲ ವೃತ್ತದ ಸಂಚಾರ ಬಂದ್‌ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ಸರ್ಕಾರದ ದುಬಾರಿ ನೀತಿ ವಿರುದ್ಧ ಘೋಷಣೆ ಮೊಳಗಿಸಿದರು.

‘ತೈಲಗಳ ಮಾರಾಟದ ಮೇಲೆ ಶೇ 26ರಷ್ಟು ತೆರಿಗೆ ಹೆಚ್ಚಳ ಮಾಡಿದ್ದಾರೆ. ಇದರಿಂದ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹3.50, ಡೀಸೆಲ್‌ಗೆ ₹3 ಏರಿಕೆ ಆಗಿದೆ. ಮೇಲಾಗಿ, ಕೇಂದ್ರವೇ ದರ ಕಡಿಮೆ ಮಾಡಬೇಕು ಎಂದು ಅರ್ಥವಿಲ್ಲದ ಮಾತು ಮಾತಾಡುತ್ತಿದ್ದಾರೆ’ ಎಂದು ಈರಣ್ಣ ಕಡಾಡಿ ಕಿಡಿ ಕಾರಿದರು.

‘2021 ನವೆಂಬರ್ 4ರಂದು ಪ್ರಧಾನಿ ಮೋದಿ ಪ್ರತಿ ಲೀಟರ್‌ ಪೆಟ್ರೋಲ್‌ ₹5, ಡೀಸೆಲ್‌ ₹10 ದರ ಕಡಿಮೆ ಮಾಡಿದ್ದರು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬೊಮ್ಮಾಯಿ ಸರ್ಕಾರ ಕೂಡ ₹7 ಕಡಿಮೆ ಮಾಡಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಮಾರಾಟ ತೆರಿಗೆ ಹೆಚ್ಚು ಮಾಡಿದೆ’ ಎಂದು ಆರೋಪಿಸಿದರು.

‘ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಶೇ 25ರಿಂದ ಶೇ 30ರಷ್ಟು ವಿದ್ಯುತ್ ದರ ಏರಿಸಿದ್ದಾರೆ. ರೈತರ ಪಂಪ್‌ಸೆಟ್‌ಗಳಿಗೆ ಟಿ.ಸಿ ಅಳವಡಿಸಲು ₹1.5 ಲಕ್ಷದಿಂದ ₹3 ಲಕ್ಷದವರೆಗೆ ದರ ಹೆಚ್ಚಿಸಿದ್ದಾರೆ. ನಿವೇಶನ ಮತ್ತು ಕಟ್ಟಡ ಮಾರ್ಗಸೂಚಿ ದರವನ್ನು ಶೇ 20ರಿಂದ ಶೇ 50ರವರೆಗೆ ಏರಿಸಿದ್ದಾರೆ. ರೈತರ ವಾಟ್ನಿ ಪತ್ರದ ದರವನ್ನು ₹250ರಿಂದ ₹1,000ಕ್ಕೆ, ಆಸ್ತಿ ಅಗ್ರಿಮೆಂಟ್ ಬಾಂಡ್, ಬ್ಯಾಂಕ್ ಗ್ಯಾರಂಟಿ ಶುಲ್ಕವನ್ನು ₹200ರಿಂದ ₹500ಕ್ಕೆ ಹೆಚ್ಚಿಸಲಾಗಿದೆ. ಹಾಲಿನ ದರವನ್ನು ₹3, ಬಿತ್ತನೆಬೀಜ– ಗೊಬ್ಬರಗಳ ದರವನ್ನು ಶೇ 30ರಷ್ಟು ಎರಿಸಲಾಗಿದೆ. ಈ ಮೂಲಕ ರೈತರು ಹಾಗೂ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದ್ದಾರೆ’ ಎಂದೂ ದೂರಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಗ್ರಾಮಂತರ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕರಾದ ಮಹದೇವಪ್ಪ ಯಾದವಾಡ, ಸಂಜಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮುಖಂಡರಾದ ಎಂ.ಬಿ‌.ಜೀರಲಿ, ಮುರುಘೇಂದ್ರಗೌಡ ಪಾಟೀಲ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.