ADVERTISEMENT

ಬೆಳಗಾವಿ: ​ಶಿಶುಗಳ ಸಾವು ಪ್ರಕರಣ: ಫಾರ್ಮಸಿಸ್ಟ್, ಎಎನ್‌ಎಂ ಅಮಾನತು

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 12:01 IST
Last Updated 17 ಜನವರಿ 2022, 12:01 IST

ಬೆಳಗಾವಿ: ‘ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮಲ್ಲಾಪುರ ಹಾಗೂ ಬೋಚಬಾಳ ಗ್ರಾಮದಲ್ಲಿ ಮೂರು ಶಿಶುಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಎನ್‌ಎಂ (ಶುಶ್ರೂಷಕಿ) ಸಲೀಮಾ ಮಹಾತ್ ಹಾಗೂ ಫಾರ್ಮಸಿಸ್ಟ್ ಜಯರಾಜ ಕುಂಬಾರ ಅವರನ್ನು ವಿಚಾರಣೆ ಕಾಯ್ದಿರಿಸಿ ಸೋಮವಾರ ಅಮಾನತುಗೊಳಿಸಲಾಗಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

‘ಅವರು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ. ಲಸಿಕೆ ನೀಡಿಕೆಯಲ್ಲಿನ ಮಾರ್ಗಸೂಚಿ ಪಾಲಿಸದಿರುವುದು ಮತ್ತು ತಡವಾಗಿ ಕೊಟ್ಟಿರುವುದು ಜಿಲ್ಲಾ ಲಸಿಕಾಧಿಕಾರಿ ಸಲ್ಲಿಸಿದ ವರದಿಯಿಂದ ತಿಳಿದುಬಂದಿದೆ. ಹೀಗಾಗಿ ಶಿಸ್ತುಕ್ರಮ ಜರುಗಿಸಲಾಗಿದೆ. ಆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆದರ್ಶ ಬನಪ್ಪನವರ ಅವರಿಗೂ ನೋಟಿಸ್ ಜಾರಿಗೊಳಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ದಡಾರ ಬಾರದಿರಲೆಂದು ನೀಡುವ ರುಬೆಲ್ಲಾ ಲಸಿಕೆಯನ್ನು ಜ. 10ರಂದು ತೆಗೆದುಕೊಂಡು ಹೋಗಿದ್ದ ಆ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಅಂದೇ ಮಕ್ಕಳಿಗೆ ನೀಡಬೇಕಿತ್ತು ಅಥವಾ ಆಸ್ಪತ್ರೆಯಲ್ಲಿ ನಿಯಮಾನುಸಾರ ಇಡಬೇಕಿತ್ತು. ಆದರೆ, 11 ಮತ್ತು 12ರಂದು ಕೊಟ್ಟಿದ್ದಾರೆ. ಎಎನ್‌ಎಂ ಲಸಿಕೆಯನ್ನು ಕಿಲ್ಲಾ ತೋರಗಲ್ಲ ಗ್ರಾಮದ ತಮ್ಮ ಹೋಟೆಲ್‍ನ ಫ್ರೀಜರ್‌ನಲ್ಲಿ ಇಟ್ಟಿದ್ದುದು ಗೊತ್ತಾಗಿದೆ. ಈ ಮೂಲಕ ಅವರು ಮಾರ್ಗಸೂಚಿ (ಕೋಲ್ಡ್‌ಚೈನ್‌) ಪಾಲಿಸಿಲ್ಲ. ಈ ವ್ಯತ್ಯಾಸದಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎನ್ನುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ’ ಎಂದು ಜಿಲ್ಲಾ ಲಸಿಕಾಧಿಕಾರಿ ಡಾ.ಈಶ್ವರ ಗಡಾದ ತಿಳಿಸಿದರು.

ADVERTISEMENT

‘ಚುಚ್ಚುಮದ್ದು ಅಡ್ಡ ಪರಿಣಾಮ ತೋರುವುದಕ್ಕೆ ಸಂಬಂಧಿಸಿದ ಸಿಬ್ಬಂದಿ ಕಾರಣವಾಗಿದ್ದಾರೆ. ಈ ಬಗ್ಗೆ ಮುಂದಿನ ಶಿಸ್ತು ಕ್ರಮಕ್ಕಾಗಿ ಡಿಎಚ್‌ಒಗೆ ವರದಿ ಸಲ್ಲಿಸಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.