ADVERTISEMENT

ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಗಿಡ ಬೆಳೆಸಿ: ಶಾಸಕ ಲಕ್ಷ್ಮಣ ಸವದಿ

ಸಸಿ ವಿತರಣೆ ಕಾರ್ಯಕ್ರಮ: ಶಾಸಕ ಲಕ್ಷ್ಮಣ ಸವದಿ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 16:04 IST
Last Updated 30 ಜೂನ್ 2024, 16:04 IST
ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ ಅವರನ್ನು ಶಾಸಕ ಲಕ್ಷ್ಮಣ ಸವದಿ ಸನ್ಮಾನಿಸಿ ಅಭಿನಂದಿಸಿದರು
ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ ಅವರನ್ನು ಶಾಸಕ ಲಕ್ಷ್ಮಣ ಸವದಿ ಸನ್ಮಾನಿಸಿ ಅಭಿನಂದಿಸಿದರು   

ಅಥಣಿ: ‘ಗಿಡಗಳನ್ನು ಹಚ್ಚುವುದು ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು. ಗಿಡಗಳನ್ನು ನೆಟ್ಟು ಪೋಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗಿಡ ಬೆಳೆಸುವುದರಿಂದ ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಸಹಕಾರಿಯಾಗುತ್ತದೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಆರ್.ಎಚ್.ಕುಲಕರ್ಣಿ ಸಭಾಂಗಣದಲ್ಲಿ ಅಥಣಿ ಮತ್ತು ಕಾಗವಾಡ ತಾಲ್ಲೂಕು ಸಹಕಾರಿ ಸಂಘಗಳ ಹಾಗೂ ವಿವಿಧ ಉದ್ದೇಶಗಳ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಬ್ಯಾಂಕ್‌ಗಳ ಒಕ್ಕೂಟದ ಆಶ್ರಯದಲ್ಲಿ ಗ್ರಾಮ ಗ್ರಾಮಗಳಲ್ಲಿ ಸಹಕಾರ ಸಂಘಗಳ ಮುಖಾಂತರ 5,000 ಸಸಿಗಳ ವಿತರಣೆ ಹಾಗೂ ಪರಿಸರ ಸಂರಕ್ಷಣಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪ್ರತಿ ಗ್ರಾಮದಲ್ಲಿ ಎರಡರಿಂದ ನಾಲ್ಕು ಸಹಕಾರಿ ಸಂಘಗಳು ಇರುತ್ತವೆ. ಪ್ರತಿ ಸಂಘದ ಸದಸ್ಯರು ಮತ್ತು ಸಿಬ್ಬಂದಿ ಕನಿಷ್ಠ 10 ರಿಂದ 15 ಗಿಡಗಳನ್ನ ದತ್ತು ಪಡೆದು ತಮ್ಮ ಸಂಘದ ಆವರಣ, ಶಾಲೆ, ದೇವಸ್ಥಾನ, ರಸ್ತೆಬದಿ ಹೀಗೆ ಅನೇಕ ಸ್ಥಳಗಳಲ್ಲಿ ನೆಟ್ಟು, ಅವುಗಳನ್ನು ಪೋಷಿಸಬೇಕು’ ಎಂದರು.

ADVERTISEMENT

ಬೆಳಗಾವಿಯ ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕ ಡಾ.ಸುರೇಶ್ ಗೌಡ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಬೆಳದಂತೆ ಮಾನವ ತನ್ನ ಸ್ವಾರ್ಥಕ್ಕಾಗಿ ಗಿಡ–ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡಿದ್ದಾನೆ. ತಂತ್ರಜ್ಞಾನದ ಅನೇಕ ದುಷ್ಪರಿಣಾಮಗಳಿಂದ ಪರಿಸರದ ಮೇಲೆ ಪರಿಣಾಮವಾಗುತ್ತಿದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಹಚಡದ ಉಪನ್ಯಾಸ ನೀಡಿ, ಅರಣ್ಯ ಇಲಾಖೆಯವರು ಸಸಿ ವಿತರಿಸುವುದಲ್ಲದೆ, ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟಿರುತ್ತಾರೆ. ಸಾರ್ವಜನಿಕರು ಅವುಗಳನ್ನು ಪೋಷಿಸುವ ಮೂಲಕ ಸಹಕರಿಸಬೇಕು’ ಎಂದರು.

ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ, ಶ್ರೀನಿವಾಸ ಸಾರವಾಡ, ಧನಂಜಯ ಪಾಠಣಕರ ಸೇರಿದಂತೆ ವಿವಿಧ ಸಹಕಾರಿ ಸಂಘದ ಧುರೀಣರು ಇದ್ದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಸಹಕಾರಿ ಸಂಘ ಸಂಸ್ಥೆಗಳಿಗೆ ಸಸಿ ವಿತರಿಸಲಾಯಿತು. ಮುರುಗೇಶ ಬಾನಿ ಸ್ವಾಗತಿಸಿದರು, ಶಿಕ್ಷಕ ಅಣ್ಣಪ್ಪ ಸವದಿ ನಿರೂಪಿಸಿದರು, ಬಿ.ಎಲ್.ಪೂಜಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.