ಚಿಕ್ಕೋಡಿ: ತಾಲ್ಲೂಕಿನ ಜೈನಾಪುರ ಹಾಗೂ ಚಿಂಚಣಿ ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ನರ್ಸರಿಗಳ ಮೂಲಕ ಪ್ರತಿ ವರ್ಷ ಸಾವಿರಾರು ಸಸಿಗಳ ಉತ್ಪಾದನೆ ಮಾಡುತ್ತಲಿದೆ. 2023–24ರ ಸಾಲಿನಲ್ಲಿ ಸರ್ಮಪಕವಾಗಿ ಮಳೆ ಇಲ್ಲದೇ ಬೇಡಿಕೆಗೆ ತಕ್ಕಷ್ಟು ಸಸಿಗಳ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ. ಇದೀಗ ಸಮರ್ಪಕವಾಗಿ ಮಳೆಯಾಗಿದ್ದರೂ ಬೇಡಿಕೆಗೆ ತಕ್ಕಷ್ಟು ಸಸಿಗಳ ಲಭ್ಯತೆ ಇಲ್ಲದೇ ಅರಣ್ಯೀಕರಣ ಮಾಡಲು ಹಿನ್ನೆಡೆಯಾಗಿದೆ.
3 ಎಕರೆ ಪ್ರದೇಶ ವ್ಯಾಪ್ತಿಯಲ್ಲಿಯ ಜೈನಾಪುರ ನರ್ಸರಿಯಲ್ಲಿ 2023ರಲ್ಲಿ 45 ಸಾವಿರ ಸಸಿಗಳ ಉತ್ಪಾದನೆ ಮಾಡಲಾಗಿತ್ತು, ಆದರೆ 2024ರಲ್ಲಿ 20 ಸಾವಿರ ಸಸಿಗಳ ಉತ್ಪಾದನೆ ಮಾಡಲಾಗಿದೆ. 5 ಎಕರೆ ಪ್ರದೇಶ ವ್ಯಾಪ್ತಿಯ ಚಿಂಚಣಿ ನರ್ಸರಿಯಲ್ಲಿ 2023ರಲ್ಲಿ 25 ಸಾವಿರ ಸಸಿಗಳನ್ನು ಉತ್ಪಾದನೆ ಮಾಡಲಾಗಿತ್ತು.
ಆದರೆ 2024ರಲ್ಲಿ ಸಸಿಗಳ ಉತ್ಪಾದನೆ 5 ಸಾವಿರಕ್ಕೆ ಕುಸಿದಿದೆ. ಹೀಗಾಗಿ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಸಸ್ಯೋತ್ಪದಾನೆ ಮಾಡಲು ಸಾಧ್ಯವಾಗಿಲ್ಲ. ಜೈನಾಪೂರ ಗ್ರಾಮದ ನರ್ಸರಿಯನ್ನು ಸಮೀಪದ ಜೈನಾಪೂರ ಕೆರೆಯ ನೀರನ್ನು ಬಳಸಿಕೊಂಡು ಬೆಳೆಸಲಾಗುತ್ತಿದ್ದು, ಮಳೆ ಇಲ್ಲದೇ ಕೆರೆಯು ಬತ್ತಿ ಹೋಗಿತ್ತು. ಹೀಗಾಗಿ ಈ ನರ್ಸರಿಯಲ್ಲೊಂದು ಸ್ವಂತ ಕೊಳವೆಬಾವಿಯ ಅವಶ್ಯಕತೆ ಇದೆ.
ಆಲ, ಅರಳಿ, ಬಸರಿ, ಗೋಣಿ, ಹೊಂಗೆ, ಬೇವು, ತಪಸಿ, ಪತ್ರಿ, ಮಹಾಗಣಿ, ಬೆಟ್ಟದ ನೆಲ್ಲಿ, ಶ್ರೀಗಂಧ, ಕರಿಬೇವು, ನುಗ್ಗೆ, ತೇಗ ಮುಂತಾದ ಸಸಿಗಳನ್ನು ಅರಣ್ಯ ಇಲಾಖೆಗೆ ಸೇರಿದ ಜೈನಾಪುರ ಹಾಗೂ ಚಿಂಚಣಿ ಗ್ರಾಮದ ನರ್ಸರಿಗಳಲ್ಲಿ ಬೆಳೆಸಲಾಗುತ್ತಿದೆ. ಮಹಾಗಣಿ, ಶ್ರೀಗಂಧ, ಹೆಬ್ಬೇವು, ಕರಿಬೇವು, ನುಗ್ಗೆ, ತೇಗ ಮುಂತಾದ ಸಸಿಗಳಿಗೆ ರೈತರ ಬೇಡಿಕೆ ಹೆಚ್ಚಿದೆ. ತೀವ್ರ ಬರಗಾಲ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಸಸಿಗಳ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ.
ಅರಣ್ಯ ಇಲಾಖೆಗೆ ಸೇರಿದ ನರ್ಸರಿಗಳಲ್ಲಿ 25 ಸಾವಿರ ಸಸಿಗಳನ್ನು ಉತ್ಪಾದಿಸದರೆ ಇವುಗಳಲ್ಲಿ ಶೇ 75ರಷ್ಟು ಅರಣ್ಯ ಇಲಾಖೆಯಿಂದ, ಶೇ 25ರಷ್ಟು ರೈತರಿಂದ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಅರಣ್ಯ ಇಲಾಖೆಯು ಚಿಕ್ಕೋಡಿ ತಾಲ್ಲೂಕಿನಲ್ಲಿ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕಳೆದ ವರ್ಷ 400 ಎಕರೆಗೂ ಹೆಚ್ಚು ಬಂಜರು ಭೂಮಿ, ಗುಡ್ಡಗಾಡು ಪ್ರದೇಶದಲ್ಲಿ ಆಲ, ಅರಳಿ, ಬಸರಿ, ಗೋಣಿ, ತಪಸಿ ಮುಂತಾದ ದೀರ್ಘಕಾಲಿಕ ಬಾಳಿಕೆಯ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.
ಚಿಕ್ಕೋಡಿ ತಾಲ್ಲೂಕಿನ ಇನ್ನೂ ಮೂರು ಕಡೆಗೆ ಅರಣ್ಯ ಇಲಾಖೆಯು ನರ್ಸರಿಗಳನ್ನು ಬೆಳಸಿ ಸಸಿಗಳು ರೈತರಿಗೆ ಸುಲಭವಾಗಲಿ ದೊರೆಯುವ ವ್ಯವಸ್ಥೆ ಮಾಡಬೇಕಿದೆಅಣ್ಣಪ್ಪ ಹಳಿಜೋಳ ಸಾಮಾಜಿಕ ಕಾರ್ಯಕರ್ತ
ದೀರ್ಘಕಾಲಿಕ ಮರಗಳನ್ನು ಬೆಳೆಸುವುದರಿಂದ ಪ್ರಾಣಿ ಪಕ್ಷಿ ಸಂಕುಲ ಹೆಚ್ಚಲು ಸಾಧ್ಯವಿದೆ. ಹೀಗಾಗಿ ಅರಣ್ಯ ಇಲಾಖೆ ಇಂತಹ ಸಸಿಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆಪ್ರಶಾಂತ ಗೌರಾಣಿ ವಲಯ ಅರಣ್ಯಾಧಿಕಾರಿ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.