ADVERTISEMENT

ಬೆಳಗಾವಿಗೆ ನಿಷೇಧಿತ, ವಿಷಕಾರಿ ಗಣಪ ಮೂರ್ತಿಗಳ ಲಗ್ಗೆ!

ಮಾರಾಟ ನಿರಾತಂಕ; ಜಲ ಮೂಲ ಸಂರಕ್ಷಣಾ ಅಧಿಕಾರಿಗಳ ನಿರ್ಲಕ್ಷ್ಯ

ಎಂ.ಮಹೇಶ
Published 22 ಆಗಸ್ಟ್ 2018, 14:11 IST
Last Updated 22 ಆಗಸ್ಟ್ 2018, 14:11 IST
ಬೆಳಗಾವಿಯ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿರುವುದು– ಪ್ರಜಾವಾಣಿ ಚಿತ್ರ
ಬೆಳಗಾವಿಯ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿರುವುದು– ಪ್ರಜಾವಾಣಿ ಚಿತ್ರ   

ಬೆಳಗಾವಿ: ಜಿಲ್ಲೆಯಾದ್ಯಂತ ವಿಷಕಾರಿ ಹಾಗೂ ನಿಷೇಧಿತ ಪಿಒಪಿ (‍ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಈ ಮೂರ್ತಿಗಳ ಮಾರಾಟ ನಿರಾತಂಕವಾಗಿ ನಡೆಯುತ್ತಿದ್ದು, ಜಲಮೂಲಗಳ ಸಂರಕ್ಷಣೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತಿದೆ. ಪಿಒಪಿ ಮೂರ್ತಿಗಳ ತಯಾರಿಕೆ, ಸಾಗಣೆ ತಡೆಗಟ್ಟುವಲ್ಲಿ ಅಥವಾ ಅವುಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವಲ್ಲೂ ಅಧಿಕಾರಿಗಳು ವಿಫಲವಾಗಿದ್ದಾರೆ. ಎಚ್ಚರಿಕೆಗಳು, ನಿಷೇಧ ಆದೇಶಗಳು ಕಾಗದದಲ್ಲಿ ಮಾತ್ರವೇ ಉಳಿದಿವೆ.

ಬಹಳ ದೊಡ್ಡ ಪ್ರಮಾಣದ ವಿಷ, ಜಲಮೂಲಗಳ ಒಡಲು ಸೇರುವುದನ್ನು ತಪ್ಪಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅಥವಾ ಪೊಲೀಸರು ಸಮನ್ವಯದಿಂದ ಮುಂಜಾಗ್ರತಾ ಕ್ರಮ ವಹಿಸದಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

ADVERTISEMENT

ಈಗಾಗಲೇ ಆರ್ಡರ್:ಜಿಲ್ಲೆಯ ಬಹುತೇಕ ಕಡೆಗಳಲ್ಲಿ, ಅದರಲ್ಲೂ ನಗರದಲ್ಲಿ ಗಣೇಶ ಚತುರ್ಥಿಯನ್ನು ಅತ್ಯಂತ ಸಂಭ್ರಮ–ಸಡಗರದಿಂದ ಆಚರಿಸಲಾಗುತ್ತದೆ. ನೂರಾರು ವೃತ್ತ, ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಆಕರ್ಷಕ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಮಂಡಳಗಳ ನಡುವೆ ಪೈಪೋಟಿ ಕಂಡುಬರುತ್ತದೆ. ಹೀಗಾಗಿ, ತಿಂಗಳಿಗೆ ಮುಂಚಿತವಾಗಿಯೇ ಗಣೇಶಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಈಗಾಗಲೇ ಬಹಳಷ್ಟು ಮಂದಿ, ಮುಂಗಡ ಹಣ ನೀಡಿ ‘ಆರ್ಡರ್‌’ ಕೊಟ್ಟಿದ್ದಾರೆ. ಮೂರ್ತಿಗಳಲ್ಲಿ ಪಿಒಪಿಯಿಂದ ತಯಾರಿಸಿದವೂ ಇವೆ. ಬಣ್ಣಲೇಪಿತ ಮೂರ್ತಿಗಳನ್ನು ನಿಷೇಧಿಸಿ, ವರ್ಷಗಳೇ ಉರುಳಿದ್ದರೂ ಇದನ್ನು ಅನುಷ್ಠಾನಕ್ಕೆ ತರುವ ಕೆಲಸ ಪರಿಣಾಮಕಾರಿಯಾಗಿ ನಡೆದಿಲ್ಲ.

ಅಧಿಕಾರಿಗಳ ಸೂಚನೆ ನಡುವೆಯೂ:ಎಚ್ಚರಿಕೆಗಳು ಪ್ರತಿ ವರ್ಷದ ‘ಶಾಸ್ತ್ರ’ ಎನ್ನುವಂತಾಗಿದೆ. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅಧಿಕಾರಿಗಳ ಸಭೆ ನಡೆಸಿ, ಎಚ್ಚರಿಕೆ ನೀಡಿದ್ದಾರೆ. ಮೂರ್ತಿ ತಯಾರಕರು, ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪತ್ರ ಬರೆದು ಸೂಚನೆಗಳನ್ನು ನೀಡಲಾಗಿದೆ. ಇದರ ಹೊರತಾಗಿಯೂ, ಮಾರುಕಟ್ಟೆಯಲ್ಲಿ ಈಗಾಗಲೇ ಪಿಒಪಿ ಮೂರ್ತಿಗಳು ‘ಪ್ರತಿಷ್ಠಾಪನೆ’ಯಾಗಿವೆ. ಅವುಗಳನ್ನು ವಶಪಡಿಸಿಕೊಂಡು ‘ಬಿಸಿ’ ಮುಟ್ಟಿಸುವ ಅಥವಾ ಅರಿವು ಮೂಡಿಸುವ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಂಡಿದ್ದು, ವರದಿಯಾಗಿಲ್ಲ.

ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಗಳಿವೆ. ಪ್ರತ್ಯೇಕವಾಗಿ ಪರಿಸರ ಅಧಿಕಾರಿಗಳಿದ್ದಾರೆ.

ಅಧಿಕಾರಿಗಳ ಕಣ್ತಪ್ಪಿಸಿ, ಬಹಳ ದೊಡ್ಡ ಪ್ರಮಾಣದಲ್ಲಿ ಪಿಒಪಿ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದಾದರೂ ಹೇಗೆ ಎನ್ನುವ ಪ್ರಶ್ನೆಯೂ ಪ್ರಜ್ಞಾವಂತರನ್ನು ಕಾಡುತ್ತಿದೆ‌. ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಮೂರ್ತಿಗಳು ಬರುತ್ತಿದ್ದು, ತಡೆಯುವ ಪ್ರಯತ್ನ ನಡೆದಿಲ್ಲ ಎಂಬ ಆರೋಪವೂ ಇದೆ.

‘ಚಿಕ್ಕೋಡಿ ಪಟ್ಟಣದಲ್ಲಿ ಸ್ಥಳೀಯ ಸಂಸ್ಥೆಯವರ ಸಹಕಾರದಿಂದ ಈಚೆಗೆ, ಪಿಒ‍ಪಿಯಿಂದ ತಯಾರಿಸಿದ 25 ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರಿವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಮೂಲಕ, ನಿಷೇಧಿತ ಮೂರ್ತಿಗಳನ್ನು ಜಲಮೂಲಗಳಿಗೆ ವಿಸರ್ಜಿಸುವುದಕ್ಕೆ ಕಡಿವಾಣ ಹಾಕಲಾಗುತ್ತಿದೆ’ ಎಂದು ಮಂಡಳಿಯ ಚಿಕ್ಕೋಡಿ ವಿಭಾಗದ ಪರಿಸರ ಅಧಿಕಾರಿ ಐ.ಎಚ್. ಜಗದೀಶ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.