ADVERTISEMENT

ಬೆಳಗಾವಿ: ಉದ್ಯಮಿ ಕೊಲೆ ಮಾಡಿಸಿದ ಪತ್ನಿ? ಪುತ್ರಿಯಿಂದಲೇ ತಾಯಿ ವಿರುದ್ಧ ದೂರು

ಅಮ್ಮನ ಫೇಸ್‌ಬುಕ್‌ ಸ್ನೇಹಿತ, ಮನೆಗೆಲಸದವರ ಮೇಲೆ ಸಂದೇಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:10 IST
Last Updated 16 ಅಕ್ಟೋಬರ್ 2024, 14:10 IST
<div class="paragraphs"><p>ಉದ್ಯಮಿ ಸಂತೋಷ ಹಾಗೂ ಪತ್ನಿ ಉಮಾ</p></div>

ಉದ್ಯಮಿ ಸಂತೋಷ ಹಾಗೂ ಪತ್ನಿ ಉಮಾ

   

ಬೆಳಗಾವಿ: ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ (47) ಅವರ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ‘ಇದು ಸಂಚು ರೂಪಿಸಿ ಮಾಡಿದ ಕೊಲೆ’ ಎಂದು ಪೊಲೀಸರು ಸಂದೇಹಪಟ್ಟಿದ್ದಾರೆ. ಬುಧವಾರ ಶವ ಹೊರ ತೆಗೆದು ತನಿಖೆ ಆರಂಭಿಸಲಾಗಿದೆ. ಸಂತೋಷ ಪತ್ನಿ ಹಾಗೂ ಇತರ ನಾಲ್ವರ ವಿರುದ್ಧ ಅವರ ಪುತ್ರಿ ಸಂಜನಾ ದೂರು ದಾಖಲಿಸಿದ್ದಾರೆ.

‘ಸಂಜನಾ ಅವರ ತಾಯಿ ಉಮಾ (41), ಇವರ ಫೇಸ್‌ಬುಕ್‌ ಸ್ನೇಹಿತ, ಮಂಗಳೂರು ಮೂಲದ ಶೋಬಿತ್‌ ಗೌಡ (30), ಮನೆಗೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ಹಾಗೂ ಇನ್ನೊಬ್ಬ ಅಪರಿಚಿತ ಸೇರಿಕೊಂಡು ಕೊಲೆ ಮಾಡಿದ್ದಾರೆ’ ಎಂದು ಎಫ್‌ಐಆರ್‌ ದಾಖಲಿಸಲಾಗಿದೆ.

ADVERTISEMENT

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಇಲ್ಲಿನ ಆಂಜನೇಯ ನಗರದ ಮೂರು ಅಂತಸ್ತಿನ ಕಟ್ಟಡದಲ್ಲಿ ಸಂತೋಷ ಅವರು ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರೊಂದಿಗೆ ವಾಸವಾಗಿದ್ದರು. ಅಕ್ಟೋಬರ್‌ 9ರಂದು ರಾತ್ರಿ ಏಕಾಏಕಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಉಮಾ ತಿಳಿಸಿದ್ದರು. ಇದನ್ನು ನಂಬಿದ ಕುಟುಂಬದವರು ಅ.10ರಂದು ಅಂತ್ಯಕ್ರಿಯೆ ಮುಗಿಸಿದ್ದರು.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವರ ಪುತ್ರಿ ಸಂಜನಾ (19) ಅದೇ ದಿನ ಬೆಳಗಾವಿಗೆ ಬಂದರು. ತಮ್ಮ ತಂದೆಯ ಕೊನೆಯ ಕ್ಷಣಗಳನ್ನು ನೋಡಬೇಕು ಎಂದು ಬಯಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸತೊಡಗಿದರು. ಅವರನ್ನು ಗದರಿಸಿದ ತಾಯಿ ಉಮಾ, ಸ್ನಾನ ಮಾಡಿಕೊಂಡು ಬಾ ನಂತರ ತೋರಿಸುತ್ತೇನೆ ಎಂದು ಕಳಿಸಿದ್ದರು.

ಸಂಜನಾ ಅತ್ತ ಹೋಗುತ್ತಿದ್ದಂತೆಯೇ ತಮ್ಮ ಇಬ್ಬರು ಪುತ್ರರನ್ನು ಕರೆದ ಉಮಾ; ಕೊಲೆ ನಡೆದ ಸಮಯದ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲಿಟ್‌ ಮಾಡಿಸಿದ್ದರು. ಈ ವಿಷಯವನ್ನು ಇಬ್ಬರೂ ಬಾಲಕರು ತಮ್ಮ ಅಕ್ಕ ಸಂಜನಾಗೆ ತಿಳಿಸಿದರು. ಆ ಕ್ಷಣದಿಂದಲೇ ಸಂಜನಾಗೆ ಅನುಮಾನ ಶುರುವಾಯಿತು.

ತನ್ನ ತಂದೆ ಆರೋಗ್ಯವಾಗಿದ್ದರು. ಅವರದು ಸಹಜ ಸಾವಲ್ಲ; ಕೊಲೆ ಎಂದು ಅನುಮಾನಿಸಿ ಅ.15ರಂದು ಇಲ್ಲಿನ ಮಾಳಮಾರುತಿ ಠಾಣೆಗೆ ದೂರು ನೀಡಿದರು.

ಪೊಲೀಸ್‌ ಮಾಹಿತಿ ಏನು?: ‘ಉಮಾ ತನ್ನ ಫೇಸ್‌ಬುಕ್‌ ಸ್ನೇಹಿತ ಶೋಬಿತ್‌ ಗೌಡ ಜತೆ ಸಲುಗೆ ಬೆಳೆಸಿಕೊಂಡಿದ್ದರು. ಈ ಸಂದೇಹದಿಂದ ಸಂತೋಷ ಜಗಳ ಶುರು ಮಾಡಿದ್ದರು. ಅವರ ಉಪಟಳ ತಾಳದೇ ಉಮಾ ಕೊಲೆ ಸಂಚು ರೂಪಿಸಿದ್ದರು. ಅ.9ರಂದು ಕುಡಿಯುವ ನೀರಿನಲ್ಲಿ ನಿದ್ರೆ ಮಾತ್ರ ಹಾಕಿದ್ದರು. ಸಂತೋಷ ನಿದ್ರೆಗೆ ಜಾರಿದ ಮೇಲೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಅನುಮಾನ ಇದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಮೂರು ಅಂತಸ್ತಿನ ಸಂತೋಷ ಮನೆಯಲ್ಲಿ ಬೆಡ್ ರೂಮ್ ಸೇರಿ 15 ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಆದರೆ, ಸಾವಿನ ದಿನದ ಬಹುತೇಕ ಫುಟೇಜ್‌ಗಳನ್ನು ಡಿಲಿಟ್‌ ಮಾಡಿದ್ದು ಅನುಮಾನ ಹುಟ್ಟಿಸಿದೆ. ಎದುರು ಮನೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದಾಗ, ಇಬ್ಬರು ಗಂಡಸರು ತಡರಾತ್ರಿ ಮನೆಯಿಂದ ಹೊರ ಹೋಗಿದ್ದು ಕಂಡುಬಂದಿದೆ. ಅವರ ವಿಚಾರಣೆ ಮೂಲಕ ಪ್ರಕರಣ ಬಯಲಿಗೆ ಬಂತು’ ಎಂದೂ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಸದಾಶಿವನಗರದಲ್ಲಿ ಹೂತಿದ್ದ ಸಂತೋಷ ಅವರ ಶವವನ್ನು ಹೊರತೆಗೆದ ಪೊಲೀಸರು, ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಎಸಿ ಶ್ರವಣ್‌ಕುಮಾರ್ ಸಮ್ಮುಖದಲ್ಲಿ ಬೀಮ್ಸ್ ವೈದ್ಯರು, ಎಫ್‌ಎಸ್‌ಎಲ್, ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ, ಪಾಲಿಕೆ ಸಿಬ್ಬಂದಿ, ಕಂದಾಯ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ.

ಆರೋಪಿಗಳನ್ನು ವಿಚಾರಣೆ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಕೊಲೆ ಎಂಬ ಸಂದೇಹ ಹುಟ್ಟಿಸಿದೆ. ಶವ ಹೊರತೆಗೆದು ತನಿಖೆ ಶುರು ಮಾಡಲಾಗಿದೆ.
-ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ನಗರ ಪೊಲೀಸ್‌ ಕಮಿಷನರ್‌, ಬೆಳಗಾವಿ

ಉದ್ಯಮಿ ಸಂತೋಷ ಕುಟುಂಬ

ಸಂತೋಷ ಅವರ ಮನೆ

ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಹೂತಿದ್ದ ಉದ್ಯಮಿ ಸಂತೋಷ ಪದ್ಮಣ್ಣವರ ಅವರ ಶವವನ್ನು ಬುಧವಾರ ಹೊರತೆಗೆಯಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.