ADVERTISEMENT

ಯರನಾಳದ ಪ್ರಫುಲ್ ದೇಸಾಯಿ ಸಾಧನೆ: ಯುಪಿಎಸ್ಸಿ ಪರೀಕ್ಷೆಯಲ್ಲಿ 532ನೇ ರ‍್ಯಾಂಕ್‌

ಎನ್.ಪಿ.ಕೊಣ್ಣೂರ
Published 4 ಆಗಸ್ಟ್ 2020, 13:03 IST
Last Updated 4 ಆಗಸ್ಟ್ 2020, 13:03 IST
ಪ್ರಫುಲ್‌ಗೆ ತಂದೆ ಕೆಂಪಣ್ಣ, ತಾಯಿ ಮಂಗಲಾ ಸಿಹಿ ತಿನಿಸಿದರು
ಪ್ರಫುಲ್‌ಗೆ ತಂದೆ ಕೆಂಪಣ್ಣ, ತಾಯಿ ಮಂಗಲಾ ಸಿಹಿ ತಿನಿಸಿದರು   

ಹುಕ್ಕೇರಿ: ತಾಲ್ಲೂಕಿನ ಯರನಾಳದ ಯುವಕ 27 ವರ್ಷದ ಪ್ರಫುಲ್ ದೇಸಾಯಿ ಅವರು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಯುಪಿಎಸ್ಸಿ ಪರೀಕ್ಷೆಯಲ್ಲಿ 532ನೇ ರ‍್ಯಾಂಕ್‌ ಗಳಿಸಿ ಸಾಧನ ತೋರಿದ್ದಾರೆ.

ಪ್ರಗತಿಪರ ರೈತ ಕೆಂಪಣ್ಣ ದೇಸಾಯಿ ಅವರ ಏಕೈಕ ಪುತ್ರ ಇವರು. ಪಕ್ಕದ ಬಡಕುಂದ್ರಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ 1–4ನೇ ತರಗತಿವರೆಗೆ, ಹಿಡಕಲ್ ಡ್ಯಾಂ ಎಚ್‌ಡಿಪಿ ಕನ್ನಡ ಮಾಧ್ಯಮ ಮಾದರಿ ಶಾಲೆಯಲ್ಲಿ 5ರಿಂದ 7ನೇ ತರಗತಿ, ಯರಗಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ ಓದಿದ್ದಾರೆ. ಸಂಕೇಶ್ವರದ ಎಸ್‌ಡಿವಿ ಸಂಸ್ಥೆಯ ಪಿಯುಸಿ (ವಿಜ್ಞಾನ), ಹುಬ್ಬಳ್ಳಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಮೆಕ್ಯಾನಿಕಲ್ ವಿಭಾಗ) ಎಂಜಿನಿಯರಿಂಗ್ ಮುಗಿಸಿದ್ದಾರೆ.

‘ವಿದ್ಯಾರ್ಥಿ ಆಗಿದ್ದಾಗಿನಿಂದಲೂ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಯಿಂದ ಸಾಕಷ್ಟು ಕಲಿತಿದ್ದೇನೆ’ ಎನ್ನುತ್ತಾರೆ.

ADVERTISEMENT

ಒಂದೂವರೆ ವರ್ಷದಿಂದ ಜಲಸಂಪನ್ಮೂಲ ಇಲಾಖೆಯಲ್ಲಿ (ಬೆಂಗಳೂರು) ಸಹಾಯಕ ಎಂಜನಿಯರ್ ಆಗಿದ್ದಾರೆ. ದೆಹಲಿಯ ಶ್ರೀರಾಮ್ ಐಎಎಸ್ ಕೋಚಿಂಗ್ ಸೆಂಟರ್‌ನಲ್ಲಿ ಐಎಎಸ್ ಪರೀಕ್ಷೆಗೆ ಕೋಚಿಂಗ್ ಪಡೆದು 2 ಬಾರಿ ವಿಫಲವಾಗಿದ್ದರು. 3ನೇ ಬಾರಿಗೆ ಸಫಲಗೊಂಡಿದ್ದಾರೆ.

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಪೈಪೋಟಿಗೆ ಸನ್ನದ್ಧರಾಗಬೇಕು. ಪರೀಕ್ಷೆ ಎದುರಿಸಲು ಕನಿಷ್ಠ 6ರಿಂದ 8 ತಾಸು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

‘ಗುರಿ ಮುಟ್ಟಲು ನಿರಂತರ ಪ್ರಯತ್ನ ಮುಖ್ಯ. ಅದಕ್ಕೆ ಭಾಷೆ ಅಡ್ಡಿಯಾಗದು. ಪರೀಕ್ಷೆಯಲ್ಲಿ ಭಾಷೆಗಿಂತ ವಿಷಯಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ’ ಎಂದರು.

ಪ್ರಫುಲ್ ಮೊದಲಿನಿಂದಲೂ ಪ್ರತಿಭಾವಂತ. ಜೀವನದಲ್ಲಿ ಆತ ಏನನ್ನಾದರೂ ಸಾಧಿಸಬಹುದು ಎಂಬ ನಿರೀಕ್ಷೆ ಇತ್ತು. ಅದು ಇಂದು ಸಾಕಾರಗೊಂಡಿದೆ ಎಂದು ತಂದೆ ಕೆಂಪಣ್ಣ, ತಾಯಿ ಮಂಗಲಾ ದೇಸಾಯಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.