ಬೆಳಗಾವಿ: ‘ಬಿಜೆಪಿ ಮೈತ್ರಿಕೂಟದ ಪಾಲುದಾರ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರವಾಗಿ, ಬಿಜೆಪಿಯವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆಗ್ರಹಿಸಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಇದು ಇಡೀ ಸಮಾಜವೇ ತಲೆ ತಗ್ಗಿಸುವಂಥ ಘಟನೆ. ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಪ್ರಜ್ವಲ್ ಅವರಿಂದ ಎಷ್ಟು ಮಹಿಳೆಯರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂಬುದು ತನಿಖೆ ನಂತರವೇ ತಿಳಿಯಲಿದೆ. ಅವರು ಸಂಸದರಾಗಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಅಥವಾ ಬೇರೆ ಆಮಿಷವೊಡ್ಡಿ ಮೋಸ ಮಾಡಿದ್ದಾರೆಯೇ ಎಂಬುದು ತಿಳಿಯಬೇಕಿದೆ. ಆದರೆ, ಪ್ರಜ್ವಲ್ ವಿದೇಶಕ್ಕೆ ಹೋಗಿರುವುದರಿಂದ ಸರ್ಕಾರ ಇಂಟರ್‌ಪೋಲ್‌ಗಳ ಸಹಾಯ ಪಡೆಯಬೇಕೆಂದು ಬಯಸುತ್ತೇವೆ’ ಎಂದರು.
‘ಬಿಜೆಪಿ ಮುಖಂಡ ದೇವರಾಜಗೌಡ ಮತ್ತು ಮಾಜಿ ಶಾಸಕ ಪ್ರೀತಮ್ ಗೌಡ ಅವರು, ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ತಿಳಿಸಿದ್ದರು. ಆದರೆ, ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಆಪಾದಿಸಿದರು.
‘ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾದಾಗ, ಬಿಜೆಪಿ ನಾಯಕರು ರಾಜ್ಯದಾದ್ಯಂತ ಪ್ರತಿಭಟಿಸಿದ್ದರು. ಆದರೆ, ಪ್ರಜ್ವಲ್ ಕರ್ಮಕಾಂಡದ ವಿಷಯ ಬಂದಾಗ ಅದೇ ನಾಯಕರು ಕುರುಡರು ಮತ್ತು ಕಿವುಡರಂತೆ ವರ್ತಿಸುತ್ತಿದ್ದಾರೆ’ ಎಂದು ಟೀಕಿಸಿದರು.
‘ಮಾಜಿ ಶಾಸಕ ಸಂಜಯ ಪಾಟೀಲ ನನ್ನನ್ನು ನಿಂದಿಸಿದಾಗ ಜಗದೀಶ ಶೆಟ್ಟರ್ ಮತ್ತು ಸಂಸದೆ ಮಂಗಲಾ ಅಂಗಡಿ ನಕ್ಕಿದ್ದರು. ಈಗ ಪ್ರಜ್ವಲ್ ಕೃತ್ಯದ ವಿರುದ್ಧವೂ ಅವರೆಲ್ಲರೂ ಪ್ರತಿಭಟನೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ನೇಹಾ ಕೊಲೆ ಪ್ರಕರಣದಲ್ಲಿ ಅತೀವ ಆಸಕ್ತಿ ತೋರಿದ್ದ ಬಿಜೆಪಿ ನಾಯಕರು ಈ ಪ್ರಕರಣದಲ್ಲಿ ಮಾತನಾಡುತ್ತಿಲ್ಲ’ಲಕ್ಷ್ಮಿ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.