ADVERTISEMENT

ಚಿಕ್ಕೋಡಿ, ಗೋಕಾಕದಲ್ಲಿ ಬ್ಲಡ್ ಬ್ಯಾಂಕ್ ಪ್ರಸ್ತಾವ ಸಲ್ಲಿಕೆಗೆ ಸುಧಾಕರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 15:58 IST
Last Updated 20 ಡಿಸೆಂಬರ್ 2021, 15:58 IST
ಬೆಳಗಾವಿಯಲ್ಲಿ ಸೋಮವಾರ ನಡೆದ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದರು
ಬೆಳಗಾವಿಯಲ್ಲಿ ಸೋಮವಾರ ನಡೆದ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದರು   

ಬೆಳಗಾವಿ: ‘ಜಿಲ್ಲೆಯ ಗೋಕಾಕ ಹಾಗೂ ಚಿಕ್ಕೋಡಿಯಲ್ಲಿ ರಕ್ತ ಭಂಡಾರ (ಬ್ಲಡ್ ಬ್ಯಾಂಕ್) ಸ್ಥಾಪನೆಗೆ ಸಂಬಂಧಿಸಿದಂತೆ ಪ್ರಸ್ತಾವ ಕಳುಹಿಸಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೂಚಿಸಿದರು.

ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ನಡೆದ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಸದ್ಯಕ್ಕೆ ಒಂದೇ ಬ್ಲಡ್ ಬ್ಯಾಂಕ್ ಇರುವುದರಿಂದ ಚಿಕ್ಕೋಡಿ ಹಾಗೂ ಗೋಕಾಕ ಭಾಗದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸುವ ಅಗತ್ಯವಿದೆ’ ಎಂದರು.

ADVERTISEMENT

‘ಜನೌಷಧಿ ಕೇಂದ್ರಗಳ ಮೂಲಕ ಹೆಚ್ಚು ಜನರಿಗೆ ಕಡಿಮೆ‌ ದರದಲ್ಲಿ ಔಷಧಿ ಲಭಿಸಬೇಕು. ಈ ನಿಟ್ಟಿನಲ್ಲಿ ಡಿಎಚ್ಒ ಸೂಕ್ತ ಕ್ರಮ ವಹಿಸಬೇಕು. ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜನೌಷಧಿ ಕೇಂದ್ರಗಳನ್ನು ಆರಂಭಿಸಿದ್ದಾರೆ. ಹೀಗಾಗಿ, ಈ ಸೌಲಭ್ಯ ಲಭ್ಯವಾಗುವಂತೆ ಮುತುವರ್ಜಿಯಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ಮೂರು ವರ್ಷಗಳಲ್ಲಿ ದೊರೆತ ಅನುದಾನವನ್ನು ಯಾವ ರೀತಿ ಬಳಸಲಾಗಿದೆ ಎಂಬ ಮಾಹಿತಿ ಪಡೆದರು.

ಭೇಟಿ ಕಡ್ಡಾಯ:

‘ಇಲಾಖೆಯ ಎಲ್ಲ ಅಧಿಕಾರಿಗಳು ಪ್ರತಿ ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ಮುಂಬರುವ ದಿನಗಳಲ್ಲಿ ಕಡ್ಡಾಯವಾಗಿ ದಿನಚರಿ ಸಮೇತ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಬೇಕು’ ಎಂದು ನಿರ್ದೇಶನ ನೀಡಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳ ಭೇಟಿಗೆ ಸಂಬಂಧಿಸಿದಂತೆ ಫೋಟೊಗಳು ಹಾಗೂ ವರದಿ ‌ಕೊಡಬೇಕು. ಡಯಾಲಿಸಿಸ್ ವ್ಯವಸ್ಥೆಯ ಮೇಲೆ ನಿಗಾ ವಹಿಸಲು ಅನುಕೂಲ ಆಗುವಂತೆ ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ತಪ್ಪದೇ ಗೌರವಧನ ಬಿಡುಗಡೆ‌ ಮಾಡಬೇಕು. ಅವರು ತಳಮಟ್ಟದಲ್ಲಿ ಅತ್ಯಂತ ಶ್ರಮದಾಯಕ ಕೆಲಸ ಮಾಡುವುದರಿಂದ ಅವರಿಗೆ ವೇತನ ಬಿಡುಗಡೆಯಲ್ಲಿ ವಿಳಂಬ ಆಗಬಾರದು’ ಎಂದು ತಾಕೀತು ಮಾಡಿದರು.

ಶೇ.15 ಮೀರಬಾರದು:

‘ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಶೇ.15ಕ್ಕಿಂತ ಕಡಿಮೆ ಇರಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಒಟ್ಟಾರೆ ಹೆರಿಗೆಗಳ ಪೈಕಿ ಶೇ.15ಕ್ಕಿಂತ ಅಧಿಕ ಸಿಸೇರಿಯನ್ ಮಾಡಲಾಗುತ್ತಿರುವ ಆಸ್ಪತ್ರೆಗಳ ಬಗ್ಗೆ ಗಮನಹರಿಸಬೇಕು’ ಎಂದು ತಿಳಿಸಿದರು.

‘ಕೋವಿಡ್ ಹಿನ್ನೆಲೆಯಲ್ಲಿ ಆಮ್ಲಜನಕ ಸೌಲಭ್ಯ ಹಾಗೂ ತುರ್ತು ಚಿಕಿತ್ಸೆ ಒದಗಿಸಲು ಹೆಚ್ಚಿನ ಅನುದಾನ ಬಳಕೆ ಮಾಡಲಾಗಿದೆ’ ಎಂದು ಡಿಎಚ್ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

ಆರೋಗ್ಯ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಆರೋಗ್ಯ ಇಲಾಖೆಯ ಆಯುಕ್ತ ಡಿ‌.ರಣದೀಪ್, ನಿರ್ದೇಶಕ ಡಾ.ಅಪ್ಪಾಸಾಹೇಬ ನರಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.