ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಸಮೀಪದ ಸಂಗೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ, ಸೂಕ್ತ ಸಮಯಕ್ಕೆ ಗರ್ಭಿಣಿಗೆ ಚಿಕಿತ್ಸೆ ನೀಡದ ಶುಶ್ರೂಷಕಿಯನ್ನು ವರ್ಗಾವಣೆ ಮಾಡಿದ್ದು, ಆಸ್ಪತ್ರೆಯ ಇಬ್ಬರು ವೈದ್ಯರಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ತಾಲ್ಲೂಕಿನ ಕಡತನಾಳ ಗ್ರಾಮದ ರತ್ನವ್ವ ಕಾದ್ರೊಳ್ಳಿ ಅವರನ್ನು ಗುರುವಾರ ಹೆರಿಗೆಗೆ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಆದರೆ ಅಲ್ಲಿ ವೈದ್ಯರು, ನರ್ಸ್ ಸೇರಿದಂತೆ ಯಾರೂ ಇರಲಿಲ್ಲ. ಎರಡು ತಾಸು ಆಸ್ಪತ್ರೆಯ ಆವರಣದಲ್ಲೇ ಗರ್ಭಿಣಿ ತೀವ್ರ ನರಳಾಡಿದರು. ಹೆರಿಗೆ ನೋವಿನಿಂದ ಇನ್ನಿಲ್ಲದಂತೆ ಪರದಾಡಿದರು. ಕೊನೆಗೂ ವೈದ್ಯರಾಗಲೀ, ನರ್ಸ್ ಆಗಲೀ ಬರಲಿಲ್ಲ. ಕೆಲವರು ಬೈಲಹೊಂಗಲದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿದರು.
ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮಾತ್ರ ವರದಿ ಪ್ರಕಟವಾಯಿತು. ಶುಕ್ರವಾರ ಇದನ್ನು ಗಮನಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ಸ್ಥಳಕ್ಕೆ ಧಾವಿಸಿದರು. ಕರ್ತವ್ಯದಲ್ಲಿ ಇಲ್ಲದ ಡಾ.ಸಂತೋಷ ಗಡದವರ ಮತ್ತು ಡಾ.ಸುಷ್ಮಾ ಬಾಳಮಟ್ಟಿ ಅವರಿಗೆ ನೋಟಿಸ್ ಜಾರಿ ಮಾಡಿದರು. ಪಾಳಿಯ ಕೆಲಸದಲ್ಲೂ ಗೈರಾದ ನರ್ಸ್ ಬಿ.ಶಾಂತಮ್ಮ ಅವರನ್ನು ತಕ್ಷಣ ವರ್ಗಾವಣೆ ಮಾಡಿದರು.
ಆರೋಗ್ಯ ಕೇಂದ್ರದ ಇಬ್ಬರೂ ವೈದ್ಯರು ಕರ್ತವ್ಯದಿಂದ ನುಣಿಚಿಕೊಂಡಿದ್ದು ಸಾಬೀತಾಗಿದೆ. ಅವರು ನೋಟಿಸ್‌ಗೆ ನೀಡುವ ಉತ್ತರ ಗಮನಿಸಿ ಅವರ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.