ADVERTISEMENT

ವೈಭವಯುತ 'ಕಿತ್ತೂರು ಉತ್ಸವ'ಕ್ಕೆ ಭರದ ಸಿದ್ಧತೆ: ಶಾಸಕ ಬಾಬಾಸಾಹೇಬ ಪಾಟೀಲ

ಕಿತ್ತೂರಿನಲ್ಲಿ ಮೂರು ದಿನ ವೈವಿಧ್ಯಮಯ ಕಾರ್ಯಕ್ರಮ, ಮಹಿಳೆಯರಿಗಾಗಿ ಪ್ರತ್ಯೇಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 11:10 IST
Last Updated 19 ಅಕ್ಟೋಬರ್ 2024, 11:10 IST
<div class="paragraphs"><p>ಬೆಳಗಾವಿಯಲ್ಲಿ ಶನಿವಾರ ಕಿತ್ತೂರು ಉತ್ಸವದ ಪ್ರಚಾರ ಸಾಮಗ್ರಿಗಳನ್ನು ಶಾಸಕ ಬಾಬಾಸಾಹೇಬ ‍‍‍ಪಾಟೀಲ ಬಿಡುಗಡೆ ಮಾಡಿದರು. ಎ.ಸಿ ಪ್ರಭಾವತಿ ಫಕ್ಕೀರಪುರ, ಎಸ್ಪಿ ಡಾ.ಭೀಮಾಶಂಕರ ಗುಳೇದ, ಡಿ.ಸಿ ಮೊಹಮ್ಮದ್‌ ರೋಷನ್‌ ಪಾಲ್ಗೊಂಡರು</p></div>

ಬೆಳಗಾವಿಯಲ್ಲಿ ಶನಿವಾರ ಕಿತ್ತೂರು ಉತ್ಸವದ ಪ್ರಚಾರ ಸಾಮಗ್ರಿಗಳನ್ನು ಶಾಸಕ ಬಾಬಾಸಾಹೇಬ ‍‍‍ಪಾಟೀಲ ಬಿಡುಗಡೆ ಮಾಡಿದರು. ಎ.ಸಿ ಪ್ರಭಾವತಿ ಫಕ್ಕೀರಪುರ, ಎಸ್ಪಿ ಡಾ.ಭೀಮಾಶಂಕರ ಗುಳೇದ, ಡಿ.ಸಿ ಮೊಹಮ್ಮದ್‌ ರೋಷನ್‌ ಪಾಲ್ಗೊಂಡರು

   

ಬೆಳಗಾವಿ: ‘ಚನ್ನಮ್ಮನ ಕಿತ್ತೂರಿನಲ್ಲಿ ಅ.23ರಿಂದ 25ರವರೆಗೆ ನಡೆಯಲಿರುವ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. 23ರಂದು ಸಂಜೆ 7ಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

‘ದ್ವಿಶತಮಾನೋತ್ಸವದ ಕಾರಣಕ್ಕಾಗಿ ಈ ಬಾರಿ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ ₹ 5 ಕೋಟಿ ಅನುದಾನ ಘೋಷಿಸಿದೆ. ಒಂದೆರಡು ದಿನಗಲ್ಲಿ ಸಂಪೂರ್ಣ ಅನುದಾನ ಬಿಡುಗಡೆಯಾಗಲಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕಿತ್ತೂರು ಕೋಟೆ ಆವರಣದಲ್ಲಿ ‘ರಾಣಿ ಚನ್ನಮ್ಮ ಮುಖ್ಯ ವೇದಿಕೆ’ ನಿರ್ಮಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ‘ಸರದಾರ ಗುರುಸಿದ್ದಪ್ಪ ವೇದಿಕೆ’ ನಿರ್ಮಿಸಲಾಗಿದೆ. ಎರಡೂ ಕಡೆ ಮೂರು ದಿನ ವೈವಿಧ್ಯಮಯ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ’ ಎಂದರು.

‘ಫಲ–ಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಆರೋಗ್ಯ ಮೇಳ, ಕ್ರೀಡೆ ಮತ್ತು ದೋಣಿ ವಿಹಾರ ಆಯೋಜಿಸಲಾಗಿದೆ. ಜಲಸಾಹಸ ಕ್ರೀಡೆ, ಕಬಡ್ಡಿ, ವಾಲಿಬಾಲ್‌, ಹಗ್ಗಜಗ್ಗಾಟ, ಕುಸ್ತಿ ಪಂದ್ಯಾವಳಿ ನಡೆಯಲಿವೆ. ಬೈಕ್ ರ್‍ಯಾಲಿ, ಮ್ಯಾರಥಾನ್‌ ಸೇರಿ ಮಹಿಳೆಯರಿಗಾಗಿ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉತ್ಸವ ವೀಕ್ಷಣೆಗೆ ಆಗಮಿಸುವವರಿಗೆ ಬಸ್‌ ವ್ಯವಸ್ಥೆ ಕೂಡ ಮಾಡಲಾಗಿದೆ’ ಎಂದರು.

‘ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದಂತೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೂ ಸರ್ಕಾರ ಆದ್ಯತೆ ಕೊಟ್ಟಿದೆ. ಈ ವರ್ಷ ವಿವಿಧ ಕಾಮಗಾರಿ ಕೈಗೊಳ್ಳಲು ₹ 50 ಕೋಟಿಗೂ ಅಧಿಕ ಅನುದಾನವನ್ನೂ ನೀಡಿದೆ. ಈ ಹಣದಲ್ಲೇ ನಾನಾ ಅಭಿವೃದ್ಧಿ ಕೆಲಸ ಕೈಗೊಳ್ಳುತ್ತಿದ್ದೇವೆ. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಸ್ಮಾರಕಗಳು ಮತ್ತು ಚನ್ನಮ್ಮನ ಜನ್ಮಸ್ಥಳವಾದ ಕಾಕತಿಯನ್ನು ಮುಂದಿನ ದಿನಗಳಲ್ಲಿ ಹಂತ–ಹಂತವಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕಿತ್ತೂರು ಕೋಟೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕೈಗೊಂಡ ಕಾಮಗಾರಿಗಳನ್ನು ಸತತ ಮಳೆ ಹಿನ್ನೆಲೆಯಲ್ಲಿ ಪೂರ್ಣಗೊಳಿಸಲು ಆಗಿರಲಿಲ್ಲ. ಉತ್ಸವದ ಮುನ್ನಾದಿನ ರಾತ್ರಿಯವರೆಗೂ ಎಲ್ಲ ಕಾಮಗಾರಿ ಮುಗಿಸಿ, ಜನರಿಗೆ ಅನುಕೂಲ ಕಲ್ಪಿಸುತ್ತೇವೆ’ ಎಂದರು.

ಅಗತ್ಯ ಮೂಲಸೌಕರ್ಯ: ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಮಾತನಾಡಿ, ‘ಈ ಸಲ ಕಿತ್ತೂರು ಉತ್ಸವ ವೈಭವದಿಂದ ನೆರವೇರಲಿದೆ. ಪ್ರತಿದಿನ 1 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಅವರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು. ವಸತಿಗಾಗಿ ಹೋಟೆಲ್‌ಗಳು, ಲಾಡ್ಜ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕೆಲವು ಹಾಸ್ಟೆಲ್‌ಗಳನ್ನೂ ಬಳಸಿಕೊಳ್ಳುತ್ತಿದ್ದೇವೆ’ ಎಂದರು.

‘ಕಿತ್ತೂರು ಉತ್ಸವದ ದ್ವಿಶತಮಾನೋತ್ಸವ ಹೆಚ್ಚು ಸ್ಮರಣೀಯಗೊಳಿಸಲು ‘ಏರ್ ಷೋ’ ನಡೆಸಲು ಯೋಜಿಸಿದ್ದೇವೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವರೊಂದಿಗೆ ಪತ್ರ ವ್ಯವಹಾರ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೂ, ಸಚಿವರಿಗೆ ಭೇಟಿಯಾಗಿ ಮಾತನಾಡಿದ್ದಾರೆ’ ಎಂದರು.

‘ಉತ್ಸವದ ಅಂಗವಾಗಿ ಅ.22ರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲೂ ರಸಮಂಜರಿ, ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದರು.

ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ಇತರರಿದ್ದರು.

ಬೈಲಹೊಂಗಲದಲ್ಲೂ ಕಾರ್ಯಕ್ರಮ
ಕಿತ್ತೂರು ಉತ್ಸವ ಪ್ರಯುಕ್ತ ಬೈಲಹೊಂಗಲದಲ್ಲಿ ಯಾವ ಕಾರ್ಯಕ್ರಮ ನಡೆಸದ ಕಾರಣ, ಅಲ್ಲಿನ ಜನರು ಅ.21ರಂದು ಬಂದ್‌ ಕರೆ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಡಿ.ಸಿ, ‘ಉತ್ಸವ ಹಿನ್ನೆಲೆಯಲ್ಲಿ ಅಲ್ಲಿಯೂ ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದೆವು. ಚನ್ನಮ್ಮನ ಸಮಾಧಿ ಸ್ಥಳದಲ್ಲೇ ಕಾರ್ಯಕ್ರಮ ಮಾಡುವಂತೆ ಜನರು ತಿಳಿಸಿದರು. ಆದರೆ, ಸ್ಥಳಾವಕಾಶ ಕಡಿಮೆ ಇರುವ ಕಾರಣ ಅಲ್ಲಿ ಕಾರ್ಯಕ್ರಮಕ್ಕೆ ಒಪ್ಪಿರಲಿಲ್ಲ. ಈ ಸಂಬಂಧ ಶಾಸಕ ಮಹಾಂತೇಶ ಕೌಜಲಗಿ ಅವರೊಂದಿಗೆ ಚರ್ಚಿಸಿದ್ದೇನೆ. ಉತ್ಸವ ಮುಗಿದ ನಂತರ ಬೈಲಹೊಂಗಲದಲ್ಲೇ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸೋಣ ಎಂದಿದ್ದಾರೆ. ಈ ವಿಷಯ ಜನರಿಗೆ ತಿಳಿಸಿ ಮನವೊಲಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.