ಬೆಳಗಾವಿ: ತಾಲ್ಲೂಕಿನ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಡಿಪಾಯಕ್ಕೆ ಕಾಂಕ್ರೀಟ್ ಹಾಕುವ ಕಾಮಗಾರಿಗೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಪೂಜೆ ನೆರವೇರಿಸಿದರು.
‘ರಾಜಹಂಸಗಡ ಕೋಟೆಯ ಅಭಿವೃದ್ಧಿ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆಯ ಕೆತ್ತನೆ ಈಗಾಗಲೇ ಪೂರ್ಣಗೊಂಡಿದೆ. ಶೀಘ್ರದಲ್ಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸರ್ವ ಮುಖಂಡರ ಸಭೆಯನ್ನು ಕರೆದು ಹಿಂದೂ ಸಂಸ್ಕ್ರತಿ–ಸಂಪ್ರದಾಯದಂತೆ ಪ್ರತಿಷ್ಠಾಪನೆ ನೆರವೇರಿಸಲು ದಿನಾಂಕ ನಿಗದಿಪಡಿಸಲಾಗುವುದು. ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
‘ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ವಿಶ್ವಗುರು ಬಸವಣ್ಣ, ಛತ್ರಪತಿ ಶಿವಾಜಿ ಮಹಾರಾಜ ಮೊದಲಾದ ಮಹನೀಯರು ದೇಶಕ್ಕಾಗಿ ತಮ್ಮ ಅಮೋಘ ಕೊಡುಗೆ ನೀಡಿದ್ದಾರೆ. ಇವರೆಲ್ಲರ ತ್ಯಾಗ–ಬಲಿದಾನವನ್ನು ಸದಾಕಾಲ ಸ್ಮರಿಸಬೇಕು. ಮುಂದಿನ ಪೀಳಿಗೆಗೆ ಅವುಗಳನ್ನು ತಿಳಿಸಬೇಕು ಎನ್ನುವ ಉದ್ದೇಶ ಹೊಂದಲಾಗಿದೆ’ ಎಂದರು.
ಮುಖಂಡರಾದ ಅನಂತ ಗುರವ, ಕಿರಣ, ಉಮೇಶ ಪವಾರ, ನಾಗರಾಜ ಜಾಧವ, ಸೂರಜ ತೋರವತ, ಮೊನೇಶ್ರೀ ತೋರವತ್, ಬಾಳು ಗುರವ್, ಎಂಜಿನಿಯರ್ ಮುತಗೇಕರ, ಕಿರಣ ಚತುರ, ಸಚಿನ ಸಾಮಜಿ, ಕಿರಣ ಪಾಟೀಲ, ಲಕ್ಷ್ಮಣ ಚವಾಣ, ಪರುಶರಾಮ ನಿಲಜಕರ, ಶಿವಾಜಿ ಬಸ್ತವಾಡಕರ, ಆನಂದ ಇಂಗಳೆ, ಯಲ್ಲಪ್ಪ ಎಳೆಬೈಲ್ಕರ, ಸಿದ್ದಪ್ಪ ಛತ್ರೆ, ಬಾಹು ಪವಾರ, ಶುಭಂ ತೋರವತ್, ಶ್ರೀಧರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.