ಸಂಗೊಳ್ಳಿ (ಬೆಳಗಾವಿ ಜಿಲ್ಲೆ): ವೀರರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣನ ಹುಟ್ಟೂರು ಸಂಗೊಳ್ಳಿಯಲ್ಲಿ ಜ.17, 18ರಂದು ಅದ್ಧೂರಿಯಾಗಿ ಉತ್ಸವ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿವೆ.
ಈ ಹಿಂದೆ ಸಂಗೊಳ್ಳಿ ಉತ್ಸವಕ್ಕೆ ಅತ್ಯಲ್ಪ ಅನುದಾನ ನೀಡಲಾಗುತ್ತಿತ್ತು. ಕಳೆದ ವರ್ಷ ₹50 ಲಕ್ಷ ಕೊಡುವುದಾಗಿ ಬಿಜೆಪಿ ಸರ್ಕಾರ ತಿಳಿಸಿತ್ತು. ಆದರೆ, ಸಕಾಲಕ್ಕೆ ಅನುದಾನ ಬಿಡುಗಡೆಯಾಗದ ಕಾರಣ ಉತ್ಸವದಲ್ಲಿ ವಿವಿಧ ಸೇವೆ ಒದಗಿಸಿದ ಗುತ್ತಿಗೆದಾರರು, ಸಂಗೀತ ಕಾರ್ಯಕ್ರಮ ನೀಡಿದ ಕಲಾವಿದರು ಮತ್ತು ವಿವಿಧ ಸ್ಪರ್ಧೆಗಳಲ್ಲಿ ಜಯಿಸಿದ ಕ್ರೀಡಾಪಟುಗಳು ಅಸಮಾಧಾನಗೊಂಡಿದ್ದರು.
ಈ ಬಾರಿ ಸರ್ಕಾರ ₹1.50 ಕೋಟಿ (ಹಿಂದಿನ ವರ್ಷದ ₹50 ಲಕ್ಷ ಬಾಕಿ ಸೇರಿ) ಬಿಡುಗಡೆಗೊಳಿಸಿರುವುದು, ಉತ್ಸವ ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸುತ್ತಿರುವುದು ರಾಯಣ್ಣನ ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ.
ಸಂಭ್ರಮ ಇಮ್ಮಡಿ: ಸಂಗೊಳ್ಳಿ ಹೊರವಲಯದಲ್ಲಿ 100 ಎಕರೆಯಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ವಸತಿ ಶಾಲೆ ಹಾಗೂ 10 ಎಕರೆಯಲ್ಲಿ ರಾಯಣ್ಣನ ಬಾಲ್ಯದಿಂದ ಬಲಿದಾನದವರೆಗಿನ ಇತಿಹಾಸ ಸಾರುವ ಶಿಲ್ಪವನ(ಶೌರ್ಯಭೂಮಿ) ನಿರ್ಮಿಸಲಾಗಿದೆ. ಇದಲ್ಲದೆ, ವಿವಿಧ ಅಭಿವೃದ್ಧಿ ಕಾಮಗಾರಿ ನಡೆದಿವೆ. ಈ ಸಲದ ಉತ್ಸವದಲ್ಲಿ ಇವೆಲ್ಲ ಉದ್ಘಾಟನೆಯಾಗುತ್ತಿರುವುದರಿಂದ ಉತ್ಸವಕ್ಕೆ ಕಳೆ ಬಂದಿದೆ.
ಉತ್ಸವದ ಅಂಗವಾಗಿ ಗ್ರಾಮಸ್ಥರು ತಮ್ಮ ಮನೆಗಳಿಗೆ ಸುಣ್ಣ–ಬಣ್ಣ ಬಳಿದು ಸಿಂಗರಿಸಿದ್ದಾರೆ. ಉತ್ಸವಕ್ಕೆ ಸ್ವಾಗತ ಕೋರಿ ಅಳವಡಿಸಿದ ಬ್ಯಾನರ್‌ಗಳು ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ರಾರಾಜಿಸುತ್ತಿವೆ. ಪ್ರತಿ ಬೀದಿಯನ್ನು ಗ್ರಾಮ ಪಂಚಾಯ್ತಿಯಿಂದ ಶುಚಿಗೊಳಿಸುವ ಕಾರ್ಯ ನಡೆದಿದೆ.
ಭವ್ಯ ವೇದಿಕೆ ನಿರ್ಮಾಣ: ಸಂಗೊಳ್ಳಿಯ ಸರ್ಕಾರಿ ಶಾಲೆ ಮೈದಾನದಲ್ಲಿ ಉತ್ಸವದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, 40x80 ಅಡಿ ಅಳತೆಯಲ್ಲಿ ಭವ್ಯವಾದ ವೇದಿಕೆ ನಿರ್ಮಿಸಲಾಗಿದೆ. ಎಲ್ಇಡಿ ಪರದೆ ಅಳವಡಿಸಲಾಗಿದ್ದು, ಉತ್ತಮ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ಉತ್ಸವ ವೀಕ್ಷಣೆಗೆ ಬರುವ ಜನರಿಗೆ 25 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
30 ಕಲಾತಂಡಗಳು: ‘ಈ ಸಲದ ಉತ್ಸವದಲ್ಲಿ ರಾಜ್ಯದ ವಿವಿಧೆಡೆಯ 30 ಕಲಾತಂಡಗಳು ಜಾನಪದ ಕಲೆಗಳನ್ನು ಪ್ರದರ್ಶಿಸಲಿವೆ. ಸಂಗೀತಗಾರ ಅರ್ಜುನ ಜನ್ಯಾ, ಚಂದನ ಶೆಟ್ಟಿ ಮತ್ತಿತರ ಕಲಾವಿದರು ರಸಮಂಜರಿ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
₹1.50 ಕೋಟಿ ಅನುದಾನ ಬಿಡುಗಡೆ ಭವ್ಯವಾದ ವೇದಿಕೆ ನಿರ್ಮಾಣ 25 ಸಾವಿರ ಜನರಿಗೆ ಆಸನ ವ್ಯವಸ್ಥೆ
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಸಂಗೊಳ್ಳಿಯಲ್ಲಿ ಸೈನಿಕ ವಸತಿ ಶಾಲೆ ಶಿಲ್ಪವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈಗ ಅವರಿಂದಲೇ ಅವುಗಳ ಉದ್ಘಾಟಿಸುತ್ತಿರುವುದು ಖುಷಿತಂದಿದೆ. ಇದೇ ಮೊದಲ ಬಾರಿ ಉತ್ಸವಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ–ಮಹಾಂತೇಶ ಕೌಜಲಗಿ ಶಾಸಕ
ಸಂಗೊಳ್ಳಿಯಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದಿಂದ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಬೇಕು–ಬಸವರಾಜ ಕಮತ್ ಸಂಶೋಧಕ
ಸಂಗೊಳ್ಳಿ ಉತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಪ್ರಯತ್ನಿಸುತ್ತಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು–ಪ್ರಭಾವತಿ ಫಕೀರಪೂರ ಉಪವಿಭಾಗಾಧಿಕಾರಿ ಬೈಲಹೊಂಗಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.