ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): 'ಕಿತ್ತೂರ ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮ ಅದ್ಧೂರಿ ಆಚರಣೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಕಿತ್ತೂರಿನಲ್ಲಿ ಮಂಗಳವಾರ ಉತ್ಸವದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
'ಚನ್ನಮ್ಮನ ವಿಜಯೋತ್ಸವದ 200ನೇ ವರ್ಷದ ವರ್ಷಾಚರಣೆ ಹಾಗೂ ಕಿತ್ತೂರು ರಾಣಿ ಚನ್ನಮ್ಮನ ಉತ್ಸವವನ್ನು ಅದ್ಧೂರಿ ಹಾಗೂ ಅರ್ಥಪೂರ್ಣ ಆಚರಣೆಗೆ ಅನೇಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ' ಎಂದು ತಿಳಿಸಿದರು.
'ಅಕ್ಟೋಬರ್ 23, 24 ಮತ್ತು 25ರಂದು ರಾಜ್ಯ, ರಾಷ್ಟ್ರಮಟ್ಟದ ಕಲಾವಿದರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಂಮತ್ರಿ, ಸಚಿವರು ಆಗಮಿಸುವ ನೀರಿಕ್ಷೆಯಿದೆ. ಮುಖ್ಯ ವೇದಿಕೆ, ಸಮಾನಂತರ ವೇದಿಕೆ, ಆಸನಗಳ ವ್ಯವಸ್ಥೆ, ಮಾಧ್ಯಮ ಕೇಂದ್ರ, ಮೆರವಣಿಗೆ ಮಾರ್ಗ ಸೇರಿದಂತೆ ಇತರೆ ಸಿದ್ದತೆಗಳು ಪೂರ್ಣಗೊಂಡಿವೆ' ಎಂದರು.
ಶಾಸಕ ಬಾಬಾಸಾಹೇಬ್ ಪಾಟೀಲ ಮಾತನಾಡಿ, 'ಉತ್ಸವದ ವಿಜೃಂಭಣೆ ಆಚರಣೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ' ಎಂದು ತಿಳಿಸಿದರು.
ಮದುವಣಗಿತ್ತಿಯಂತೆ ಸಿದ್ಧಗೊಂಡ ಪಟ್ಟಣ:
ಕಿತ್ತೂರು ಉತ್ಸವ, ವಿಜಯೋತ್ಸವದ 200ನೇ ವರ್ಷದ ವರ್ಷಾಚರಣೆಯ ಅಂಗವಾಗಿ ಕಿತ್ತೂರು ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಕಿತ್ತೂರಿನ ರಾಣಿ ಚನ್ನಮ್ಮನ ಪ್ರತಿಮೆ, ವೃತ್ತ, ಮೆರವಣಗೆ ಮಾರ್ಗ, ಕೋಟೆ ಆವರಣ ಸೇರಿದಂತೆ ಇಡೀ ಕಿತ್ತೂರು ಪಟ್ಟಣ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಕಾರ್ಯಕ್ರಮದ ಮುಖ್ಯ ವೇದಿಕೆಯ ಸಿದ್ಧತೆ ಅಂತಿಮ ಹಂತದಲ್ಲಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆಗಳು ಆಗದಂತೆ ಎಲ್ಲ ರೀತಿಯ ಸಿದ್ಧತೆಗಳು ಭರದಿಂದ ಸಾಗಿವೆ.
ಬುಧವಾರ ಬೆಳಿಗ್ಗೆ ವೀರಜ್ಯೋತಿ ಸ್ವಾಗತ, ಧ್ವಜಾರೋಹಣ, ಮೆರವಣಿಗೆ, ವಸ್ತುಪ್ರದರ್ಶನ ಮಳಿಗೆ ಉದ್ಘಾಟನೆ ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ಉದ್ಘಾಟನಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.