ADVERTISEMENT

ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಆರಂಭವಾಗದ ಸಿದ್ಧತೆ

ಇಮಾಮ್‌ಹುಸೇನ್‌ ಗೂಡುನವರ
Published 13 ಜೂನ್ 2024, 23:46 IST
Last Updated 13 ಜೂನ್ 2024, 23:46 IST
ಬೆಳಗಾವಿಯ ವೀರಸೌಧ
ಬೆಳಗಾವಿಯ ವೀರಸೌಧ   

ಬೆಳಗಾವಿ: ನಗರದಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ನೆನಪಿಗೆ ವರ್ಷವಿಡೀ ವಿಶೇಷ ಕಾರ್ಯಕ್ರಮ ಆಯೋಜಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಅದಕ್ಕೆ ಬಜೆಟ್‌ನಲ್ಲಿ ₹2 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೆ, ಕಾರ್ಯಕ್ರಮದ ಸಿದ್ಧತೆ ಇನ್ನೂ ಆರಂಭಗೊಂಡಿಲ್ಲ.

1924ರ ಡಿಸೆಂಬರ್ 25 ಮತ್ತು 26ರಂದು ಬೆಳಗಾವಿಯಲ್ಲಿ (ಈಗಿನ ವೀರಸೌಧದ ಸ್ಥಳದಲ್ಲಿ) 39ನೇ ಕಾಂಗ್ರೆಸ್‌ ಅಧಿವೇಶನ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನವಿದು. ಇದೇ ಡಿಸೆಂಬರ್‌ 25ಕ್ಕೆ ಆ ಐತಿಹಾಸಿಕ ಗಳಿಗೆಗೆ 100 ವರ್ಷಗಳಾಗಲಿವೆ.

2023ರ ಡಿಸೆಂಬರ್‌ನಲ್ಲಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಅಭಯ ಪಾಟೀಲ, ‘ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆ ಮತ್ತು ಗಾಂಧಿ ಭೇಟಿ ನೀಡಿದ್ದ ಸ್ಥಳಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು’ ಎಂಬ ಖಾಸಗಿ ನಿರ್ಣಯ ಮಂಡಿಸಿದ್ದರು. ಇದನ್ನು ಅಂಗೀಕರಿಸಿದ್ದ ಸರ್ಕಾರ ₹2 ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ, ಈವರೆಗೆ ಯಾವುದೇ ಕಾರ್ಯಕ್ರಮ ನಡೆದಿಲ್ಲ.

ರಚನೆಯಾಗದ ಸಮಿತಿ:

ಶತಮಾನೋತ್ಸವ ಆಚರಣೆ ರೂಪುರೇಷೆಗಳ ಕುರಿತು ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲು ಗಾಂಧೀಜಿ ಅನುಯಾಯಿಗಳು, ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀಜಿ ತತ್ವಗಳನ್ನು ಪ್ರಚಾರ ಮಾಡುವವರು, ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸುವುದಾಗಿ ಸರ್ಕಾರ ತಿಳಿಸಿತ್ತು. ಆ ಕಾರ್ಯವೂ ಇನ್ನೂ ನೆರವೇರಿಲ್ಲ.

ADVERTISEMENT

ಅಧಿವೇಶನಕ್ಕೆ ಶತಮಾನ ತುಂಬಿದ ಗಳಿಗೆ ಪೂರ್ಣಗೊಳ್ಳಲು 6 ತಿಂಗಳಷ್ಟೇ ಬಾಕಿ ಇದೆ. 

‘ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮವನ್ನು ವೀರಸೌಧದಲ್ಲೇ ಸಡಗರದಿಂದ ಆಯೋಜಿಸಬೇಕು. ಇದಕ್ಕೆ ರಾಷ್ಟ್ರಪತಿ ಅಥವಾ ಪ್ರಧಾನಿಯನ್ನು ಆಹ್ವಾನಿಸಬೇಕು. ಇದರೊಂದಿಗೆ ವೀರಸೌಧ ಅಭಿವೃದ್ಧಿ, ಕಿರುಚಿತ್ರ ನಿರ್ಮಾಣ, ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ, ಸ್ಪರ್ಧೆ ನಡೆಸಬೇಕು ಎಂದೆಲ್ಲ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದ್ದೇವೆ. ಆದರೆ, ನಮಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಸುಭಾಷ ಕುಲಕರ್ಣಿ ತಿಳಿಸಿದರು.

ಚುನಾವಣೆ ಅಡ್ಡಿ:

‘ರಾಜ್ಯ ಸರ್ಕಾರ ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲೇ ₹2 ಕೋಟಿ ಅನುದಾನ ನೀಡಿದೆ. ಆದರೆ, ಲೋಕಸಭೆ ಚುನಾವಣೆಯ ಮಾದರಿ ನೀತಿಸಂಹಿತೆ ಜಾರಿಯಾಯಿತು. ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ನಿರತರಾದರು. ಈ ಎಲ್ಲಾ ಕಾರಣಗಳಿಂದಲೂ ಕಾರ್ಯಕ್ರಮಗಳ ಆಯೋಜನೆಗೆ ವಿಳಂಬವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಸರ್ಕಾರ ₹2 ಕೋಟಿ ನೀಡಿದೆ. ಸರ್ಕಾರದ ನಿರ್ದೇಶನದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು
ನಿತೇಶ್‌ ಪಾಟೀಲ ಜಿಲ್ಲಾಧಿಕಾರಿ ಬೆಳಗಾವಿ
ಶತಮಾನೋತ್ಸವ ಆಚರಣೆಗೆ ₹2 ಕೋಟಿ ಸಾಲದು. ಅಧಿವೇಶನದ ಮಹತ್ವವನ್ನು ಯುವಜನರು ಸೇರಿ ಎಲ್ಲರಿಗೂ ತಿಳಿಯಪಡಿಸಲು ಮತ್ತು ಕಾರ್ಯಕ್ರಮ ವಿಶಿಷ್ಟವಾಗಿ ಆಚರಿಸಲು ₹10 ಕೋಟಿ ಬೇಕು
ರಾಜೇಂದ್ರ ಕಲಘಟಗಿ ಸ್ವಾತಂತ್ರ್ಯ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.