ADVERTISEMENT

ಸಮೃದ್ಧ ಕೃಷಿ: ಭರಪೂರ ಆದಾಯ

ಇಮಾಮ್‌ಹುಸೇನ್‌ ಗೂಡುನವರ
Published 14 ನವೆಂಬರ್ 2024, 6:28 IST
Last Updated 14 ನವೆಂಬರ್ 2024, 6:28 IST
ನಿಪ್ಪಾಣಿ ತಾಲ್ಲೂಕಿನ ಸೌಂದಲಗಾ ಗ್ರಾಮದ ತಮ್ಮ ಜಮೀನಿನಲ್ಲಿ ವೀಳ್ಯದೆಲೆ ಬೆಳೆಯೊಂದಿಗೆ ರೈತ ಸಂಜಯ ಶಿಂತ್ರೆ
ನಿಪ್ಪಾಣಿ ತಾಲ್ಲೂಕಿನ ಸೌಂದಲಗಾ ಗ್ರಾಮದ ತಮ್ಮ ಜಮೀನಿನಲ್ಲಿ ವೀಳ್ಯದೆಲೆ ಬೆಳೆಯೊಂದಿಗೆ ರೈತ ಸಂಜಯ ಶಿಂತ್ರೆ   

ಬೆಳಗಾವಿ: ಕೃಷಿ ರಂಗದಲ್ಲಿ ಸದಾ ಪ್ರಯೋಗಶೀಲರಾದ ನಿಪ್ಪಾಣಿ ತಾಲ್ಲೂಕಿನ ಸೌಂದಲಗಾ ಗ್ರಾಮದ ರೈತ ಸಂಜಯ ಶಿಂತ್ರೆ ಅವರ ಹೊಲಕ್ಕೆ ಕಾಲಿಟ್ಟರೆ ಸಾಕು; ಹತ್ತಾರು ಬಗೆಯ ಬೆಳೆಗಳ ದರ್ಶನವಾಗುತ್ತದೆ. ಕಬ್ಬು, ಹೂವು, ಹಣ್ಣು, ಎಲೆಗಳು, ಈರುಳ್ಳಿ ಹೀಗೆ... ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತ, ಸಮಗ್ರ ಕೃಷಿಯಲ್ಲಿ ಅವರು ಖುಷಿ ಕಾಣುತ್ತಿದ್ದಾರೆ. ಜತೆಗೆ, ತಾಳೆ ಕೃಷಿಯೂ ಉತ್ತಮ ಆದಾಯ ನೀಡುತ್ತಿದೆ.

‘ನಾನು 18 ಎಕರೆ ಜಮೀನು ಹೊಂದಿದ್ದೇನೆ. ಯಾವುದೇ ಬೆಳೆ ಬೆಳೆಯುವ ಮುನ್ನ, ಮಾರುಕಟ್ಟೆಗೆ ಹೋಗಿ ಅಭ್ಯಸಿಸುತ್ತೇನೆ. ಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಯಾವ ಬೆಳೆ ಕೊರತೆ ಉಂಟಾಗಬಹುದು? ಯಾವುದಕ್ಕೆ ಉತ್ತಮ ಹೆಚ್ಚಿನ ಧಾರಣೆ ಸಿಗಬಹುದು ಎಂಬ ಅಂದಾಜಿನ ನಂತರವೇ, ನಾಟಿ ಮಾಡುತ್ತೇನೆ. ಕೆಲವೊಮ್ಮೆ ಲೆಕ್ಕಾಚಾರ ತಪ್ಪಿರಬಹುದು. ಆದರೆ, ಹೆಚ್ಚಿನ ಬಾರಿ ಅಂದುಕೊಂಡಂತೆ ದರ ಸಿಕ್ಕಿದೆ’ ಎನ್ನುತ್ತಾರೆ ಸಂಜಯ ಶಿಂತ್ರೆ.

‘4 ಎಕರೆಯಲ್ಲಿ ಕೇಶರ, ಆಪೂಸ್‌, ಲೊಂಚೆ ಮತ್ತಿತರ ತಳಿಗಳ 300 ಮಾವಿನ ಮರ ಬೆಳೆಸಿದ್ದೇನೆ. 2 ಎಕರೆಯಲ್ಲಿ ತಾಳೆ ಕೃಷಿ ಮಾಡಿದ್ದೇನೆ. ಪುಷ್ಪಗುಚ್ಛದಲ್ಲಿ ಹೂವುಗಳ ಹಿಂಬದಿ ಬಳಸುವ ಪಿಲ್ಲರ್‌ ಮಟೀರಿಯಲ್ಸ್‌ ಅನ್ನು ಎರಡು ಎಕರೆಯಲ್ಲಿ ಬೆಳೆದಿದ್ದೇನೆ. 30 ಗುಂಟೆಯ ಪಾಲಿಹೌಸ್‌ನಲ್ಲಿ ವೀಳ್ಯದೆಲೆ, ಒಂದು ಎಕರೆಯಲ್ಲಿ ಬಾಳೆ ಬೆಳೆ ಇದೆ. ಐದು ಎಕರೆಯ ಕಬ್ಬಿನ ಬೆಳೆಯಲ್ಲಿ ಅಂತರ್‌ಬೆಳೆಗಳಾಗಿ ಈರುಳ್ಳಿ, ಜೋಳ, ಗೋಧಿ ಬೆಳೆಯುತ್ತಿದ್ದೇನೆ. ಇದರೊಂದಿಗೆ ಚೆಂಡು ಹೂವು, ರೆಡ್‌ಕ್ಯಾಬೇಜ್‌, ಜೋಳ ಮೊದಲಾದ ಫಸಲು ತೆಗೆಯುತ್ತಿದ್ದೇನೆ. ಚಿಕ್ಕ ನರ್ಸರಿಯಲ್ಲಿ ಈರುಳ್ಳಿ ಬಿತ್ತನೆ ಬೀಜ, ಸಸಿಯನ್ನೂ ಸಿದ್ಧಪಡಿಸಿ ಮಾರುತ್ತೇನೆ’ ಎಂದು ಅವರು ಹೇಳಿದರು.

ADVERTISEMENT

ರಾಸಾಯನಿಕ ಬಳಸಿಯೇ ಹೆಚ್ಚಿನ ಬೆಳೆ ಬೆಳೆಯುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಡಿ ಮಾವು ಕೃಷಿ ಮಾಡುತ್ತಿದ್ದಾರೆ. ಒಂದಿಷ್ಟು ಜಮೀನಿನಲ್ಲಿ ಬೆಳೆಯುವ ಕಬ್ಬಿಗೂ ರಾಸಾಯನಿಕ ಸಿಂಪಡಿಸಿಲ್ಲ. ವೇದಗಂಗಾ ನದಿಯಿಂದ ಪೈಪ್‌ಲೈನ್‌ ಮೂಲಕ ತಮ್ಮ ಭೂಮಿಗೆ ನೀರು ಪಡೆಯುತ್ತರೆ. ಕೃಷಿಹೊಂಡ, ನಾಲ್ಕು ಕೊಳವೆಬಾವಿಗಳಿದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಐದು ದೇಶಿಯ ಆಕಳುಗಳಿದ್ದು, ಹೈನುಗಾರಿಕೆಯೂ ಕೈಹಿಡಿದಿದೆ.

‘ನಮ್ಮೂರ ಬೆಟ್ಟದ ಮೇಲಿನಿಂದ ಹಳ್ಳದ ನೀರು ನಮ್ಮ ಜಮೀನಿನ ಮಾರ್ಗವಾಗಿಯೇ ಹರಿದುಹೋಗುತ್ತಿತ್ತು. ಅದನ್ನು ಬಳಸಿಕೊಂಡು ಹೊಲದಲ್ಲೇ ಕಿರುಜಲಪಾತ ನಿರ್ಮಿಸಿದ್ದೇನೆ. ಯಾವುದೇ ಹೊಸ ಬೆಳೆ ಅಥವಾ ತಳಿ ಬಗ್ಗೆ ಗೊತ್ತಾದರೆ, ಪ್ರಯೋಗ ಮಾಡಿಯೇಬಿಡುತ್ತೇನೆ. ಕೆಲವು ಬೆಳೆಗಳಿಗೆ ನೇಮ್‌ಪ್ಲೇಟ್‌ ಹಚ್ಚಿದ್ದೇನೆ. ನಾನು ಮಾಡುತ್ತಿರುವ ಕೃಷಿ ವೀಕ್ಷಿಸಲೆಂದೇ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಂಶೋಧಕರು, ರೈತರು ಮತ್ತು ಸಾರ್ವಜನಿಕರೂ ಆಗಮಿಸುತ್ತಾರೆ. ಒಬ್ಬರಿಗೆ ₹50 ಪ್ರವೇಶ ಶುಲ್ಕ ಇರಿಸಿದ್ದೇನೆ. ಅವರಿಗೆ ಕೃಷಿ ಬಗ್ಗೆ ಮಾಹಿತಿ ಕೊಡುವ ಜತೆಗೆ, ಉಚಿತವಾಗಿ ಗೋಮೂತ್ರ, ಸಗಣಿ ವಿತರಿಸುತ್ತೇನೆ’ ಎಂದು ಬಿ.ಎಸ್ಸಿ ಪದವೀಧರರಾದ 52ರ ಹರೆಯದ ಸಂಜಯ ತಿಳಿಸಿದರು.

ನಾನೇ ಮಾರುತ್ತೇನೆ: ‘ಯಾವುದೇ ಬೆಳೆಯನ್ನು ಸಮೃದ್ಧವಾಗಿ ಬೆಳೆಯುವುದು ಎಷ್ಟು ಮುಖ್ಯವೋ, ಮಾರಾಟವೂ ಅಷ್ಟೇ ಮುಖ್ಯ. ಹಾಗಾಗಿ ನಿಪ್ಪಾಣಿ, ಬೆಳಗಾವಿ, ಕಾಗಲ್‌ ಸೇರಿ ವಿವಿಧ ಮಾರುಕಟ್ಟೆಗೆ ನಾನೇ ಬೆಳೆ ತೆಗೆದುಕೊಂಡು ಹೋಗಿ ಮಾರುತ್ತೇನೆ. ಹೂವು, ಹಣ್ಣನ್ನು ವಿವಿಧ ರಾಜ್ಯಗಳ ಮಾರುಕಟ್ಟೆಗೆ ಕಳುಹಿಸುತ್ತೇನೆ’ ಎಂದವರು ಹೇಳಿದರು.

‘ಎರಡೂವರೆ ದಶಕದ ಹಿಂದೆ ಕಬ್ಬು, ಈರುಳ್ಳಿ ಮಾತ್ರ ಬೆಳೆಯುತ್ತಿದ್ದೆವು. ಆದರೆ, ಕಬ್ಬಿನ ಬಿಲ್‌ಗಾಗಿ ವರ್ಷವಿಡೀ ಕಾಯಬೇಕಿತ್ತು. ಈರುಳ್ಳಿ ಧಾರಣಿ ಕುಸಿದರೆ ಬದುಕೇ ಕಷ್ಟವಾಗುತ್ತಿತ್ತು. ಈಗ ನಾನಾ ಬೆಳೆಗಳಿಂದ ವರ್ಷವಿಡೀ ಹಣ ಕೈಗೆಟುಕುತ್ತಿದೆ’ ಎಂದರು. ತೋಟಗಾರಿಕೆ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಿದೆ.

ಕುಟುಂಬಸ್ಥರು ಹಾಗೂ 10 ಮಹಿಳಾ ಕಾರ್ಮಿಕರು ಅವರ ಕೃಷಿ ಕೆಲಸಕ್ಕೆ ಸಾಥ್‌ ಕೊಡುತ್ತಿದ್ದಾರೆ
ಸಂಜಯ ಶಿಂತ್ರೆ ರೈತ ಸೌಂದಲಗಾ
ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆ ಬಳಸಿಕೊಂಡ ಸಂಜಯ ಶಿಂತ್ರೆ ಅವರು ಇತರ ರೈತರಿಗೆ ಮಾದರಿ ಎನ್ನುವಂತೆ ಕೃಷಿ ಮಾಡುತ್ತಿದ್ದಾರೆ
ಮಹಾಂತೇಶ ಮುರಗೋಡ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.