ADVERTISEMENT

ಬೆಳಗಾವಿ: ಕಾಂಗ್ರೆಸ್ ವಿರುದ್ಧ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 14:17 IST
Last Updated 24 ಜೂನ್ 2024, 14:17 IST
ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಬೆಳಗಾವಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದನ್ನು ವಿರೋಧಿಸಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಂಡ ಬಿಜೆಪಿ ಮಹಾನಗರ ಮತ್ತು ಗ್ರಾಮೀಣ ಘಟಕದ ಕಾರ್ಯಕರ್ತರು, ಕೇಂದ್ರೀಯ ಬಸ್ ನಿಲ್ದಾಣ ಬಳಿಯ ಪ್ರವಾಸಿ ಮಂದಿರದಿಂದ ಕಾಂಗ್ರೆಸ್‌ ಭವನಕ್ಕೆ ಭಿತ್ತಿಚಿತ್ರ ಅಂಟಿಸಲು ಹೊರಟಿದ್ದರು. ಮಾರ್ಗಮಧ್ಯೆಯೇ ಪೊಲೀಸರು ಅವರನ್ನು ತಡೆದರು. ಆಗ ಪರಸ್ಪರರ ಮಧ್ಯೆ ನೂಕಾಟ, ತಳ್ಳಾಟ ನಡೆಯಿತು.

ಅಭಯ ಪಾಟೀಲ, ‘ತಮ್ಮ ಸ್ವಾರ್ಥಕ್ಕಾಗಿ ನ್ಯಾಯಾಲಯದ ಆದೇಶ ಧಿಕ್ಕರಿಸಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್, ಇಂದು ಸಂವಿಧಾನದ ಪಾಠ ಮಾಡುತ್ತಿದೆ. ಮೊದಲು ಸಂವಿಧಾನವನ್ನು ಗಾಳಿಗೆ ತೂರಿ ಸಾಕಷ್ಟು ಜನರನ್ನು ಜೈಲಿಗಟ್ಟಿದ ಹಿಟ್ಲರ್‌ಶಾಹಿ ಸರ್ಕಾರ ಇದಾಗಿದೆ. ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೊದಲು ಕ್ಷಮೆ ಕೇಳಲಿ. ನಂತರ ಸಂವಿಧಾನ ಉಳಿಸುವ ಬಗ್ಗೆ ಮಾತನಾಡಲಿ’ ಎಂದು ಒತ್ತಾಯಿಸಿದರು.

ADVERTISEMENT

‘ಈ ಹಿಂದೆ ತುರ್ತು ಪರಿಸ್ಥಿತಿ ವಿರೋಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮೌನಿ ಬಾಬಾ ಆಗಿದ್ದಾರೆ. 15 ವರ್ಷಗಳ ಹಿಂದಿನ ಸಿದ್ದರಾಮಯ್ಯ ಈಗಿಲ್ಲ. ಅವರೀಗ ಕಾಂಗ್ರೆಸ್ ಸಿದ್ದರಾಮಯ್ಯ ಆಗಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ್ದನ್ನು ಈಗ ಅವರು ಖಂಡಿಸಿದರೆ, ಸೆಲ್ಯೂಟ್ ಹೊಡೆಯುತ್ತೇನೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ‘ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆದರೆ, ಸ್ವತಃ ತಾವೇ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರು ಜನರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷೆ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮುರುಘೇಂದ್ರಗೌಡ ಪಾಟೀಲ, ಡಾ.ಸೋನಾಲಿ ಸರ್ನೋಬತ್‌ ಇತರರಿದ್ದರು.
   
ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.