ADVERTISEMENT

ಬೆಳಗಾವಿ: ನೀಟ್‌ ಹಗರಣ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 15:47 IST
Last Updated 15 ಜೂನ್ 2024, 15:47 IST
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟುಡೆಂಟ್ಸ್‌ ಆರ್ಗನೈಸೇಷನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟಿಸಿದರು
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟುಡೆಂಟ್ಸ್‌ ಆರ್ಗನೈಸೇಷನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟಿಸಿದರು   

ಬೆಳಗಾವಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ನಡೆದ ಅಕ್ರಮದ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟುಡೆಂಟ್ಸ್‌ ಆರ್ಗನೈಸೇಷನ್‌(ಎಐಡಿಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕರಾದ ಮಹಾಂತೇಶ ಬಿಳೂರ, ‘ನಿಯಾಮವಳಿಗಳನ್ನು ಗಾಳಿಗೆ ತೂರಿ ಫಲಿತಾಂಶ ಪ್ರಕಟಿಸಲಾಗಿದೆ. ನೀಟ್‌ನಲ್ಲಿ ಈ ಸಲ 67 ಅಭ್ಯರ್ಥಿಗಳಿಗೆ 720ಕ್ಕೆ 720 ಅಂಕ ಗಳಿಸಿದ್ದಾರೆ. ಹರಿಯಾಣದ ಪರೀಕ್ಷಾ ಕೇಂದ್ರವೊಂದರಲ್ಲಿ ಒಂದೇ ಕೊಠಡಿಯಲ್ಲಿ 6 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ಬಂದಿವೆ. ಹಲವು ವಿದ್ಯಾರ್ಥಿಗಳು ಹೀಗೆ ಸಮಾನ ಅಂಕ ಗಳಿಸಲು ಯಾವ ವಾಮಮಾರ್ಗ ಅನುಸರಿಸಿ ಅಕ್ರಮ ಎಸಗಿದ್ದಾರೆ ಎಂಬುದನ್ನು ತನಿಖೆ ಮೂಲಕವೇ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

‘ಬಿಹಾರದಲ್ಲಿ ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದರೂ, ಸರಿಯಾಗಿ ತನಿಖೆ ನಡೆದಿಲ್ಲ. ಪಿಯು ದ್ವಿತೀಯ ವರ್ಷದ ಪರೀಕ್ಷೆಯ ರಸಾಯನ ವಿಜ್ಞಾನ ಮತ್ತು ಭೌತ ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣವಾದ ಗುಜರಾತಿನ ವಿದ್ಯಾರ್ಥಿನಿಗೆ ನೀಟ್‌ನಲ್ಲಿ 705 ಅಂಕ ಗಳಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ ಅವರು, ‘ಈ ಬಾರಿ ದೇಶದಾದ್ಯಂತ 23 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಬರೆದಿದ್ದಾರೆ. ಆದರೆ, ಈ ಹಗರಣವು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರ ಸ್ಥಿತಿಗೆ ದೂಡಿದೆ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ನಾವು ಹೋರಾಟ ಮಾಡಲಿದ್ದೇವೆ’ ಎಂದರು.

ADVERTISEMENT

ಪೀರಸಾಬ್‌, ನೇಹಾ, ಮೇಘಾ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.