ಕಾಗವಾಡ: ತಾಲ್ಲೂಕು ವಕೀಲರ ಸಂಘದಿಂದ ನ.11ರಿಂದ ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಶಾಸಕ ಲಕ್ಷ್ಮಣ ಸವದಿ ಭೇಟಿ ನೀಡಿ ಬೇಡಿಕೆ ಈಡೇರಿಸಲು ಪ್ರಾಮಾಣಿವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದು ಬರುವ ಚಳಿಗಾಲದ ಅಧಿವೇಶನ ಪೂರ್ವದಲ್ಲಿ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆಂದು ಭರವಸೆ ನೀಡಿದರು.
ತಾಲ್ಲೂಕಿನ ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸ್ಥಳದ ಬೇಡಿಕೆಗಾಗಿ ಮುಷ್ಕರ ನಡೆಸುತ್ತಿದ್ದರು.
‘ನಿಮ್ಮ ಬೇಡಿಕೆ ನನ್ನ ಗಮನದಲ್ಲಿದೆ. ಶಾಸಕ ರಾಜು ಕಾಗೆ ಅವರೊಂದಿಗೆ ಸರ್ಕಾರದ ಮುಖ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ, ಬರುವ ಚಳಿಗಾಲದ ಅಧಿವೇಶನ ಪೂರ್ವದಲ್ಲಿ ನಿಮಗೆ ಸಿಹಿಸುದ್ದಿ ನೀಡುತ್ತೇನೆ. ಒಂದು ವೇಳೆ ವಿಳಂಬವಾದಲ್ಲಿ ಇದೇ ಸ್ಥಳದಲ್ಲಿ ನಿಮ್ಮೊಂದಿಗೆ ಮುಷ್ಮರಕ್ಕೆ ಕುಳಿತು ನಿಮ್ಮ ಬೇಡಿಕೆ ಈಡೇರು ವರೆಗೆ ನಿಮ್ಮೊಂದಿಗೆ ಇರುತ್ತೇನೆ’ ಎಂಬ ಭರವಸೆ ನೀಡಿ ಮುಷ್ಕರ ಹಿಂದಕ್ಕೆ ಪಡೆಯಲು ಕೇಳಿಕೊಂಡರು.
ನಂತರ ವಕೀಲರ ಸಂಘದ ಅಧ್ಯಕ್ಷ ವಕೀಲ ಪಿ.ಎ.ಮಾನೆ ಮಾತನಾಡಿ, ಲಕ್ಷ್ಮಣ ಸವದಿ ಅವರ ಭರವಸೆಯ ನಂತರ ನಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದು ಘೋಷಿಸಿದರು.
ಇದಕ್ಕೂ ಮೊದಲು ವಕೀಲರ ಸಂಘದ ಸದಸ್ಯರು ಸಭೆ ನಡೆಸಿ ಒಂದು ವೇಳೆ ಭರವಸೆ ಈಡೇರದಿದ್ದರೆ ಅಥವಾ ವಿಳಂಬವಾದಲ್ಲಿ ಉಗ್ರವಾದ ಹೋರಾಟಕ್ಕೆ ನಾವೆಲ್ಲರು ಸಜ್ಜಾಗೋಣವೆಂಬ ನಿರ್ಣಯ ಕೈಗೊಂಡರು.
ಈ ಸಮಯದಲ್ಲಿ ತಹಶೀಲ್ದಾರ್ ರಾಜೇಶ ಬುರ್ಲಿ, ವಕೀಲರ ಸಂಘದ ಅಧ್ಯಕ್ಷ ಪಿ.ಎ.ಮಾನೆ, ಉಪಾಧ್ಯಕ್ಷ ಬಿ.ಎ.ಮಗದುಮ್ಮ, ಕಾರ್ಯದರ್ಶಿ ಎಂ.ಜಿ. ವಡ್ಡರ ಸೇರಿದಂತೆ ತಾಲ್ಲೂಕು ವಕೀಲರ ಸಂಘದ ಎಲ್ಲ ಸದಸ್ಯರು ಹಾಗೂ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.