ADVERTISEMENT

ಅತ್ಯಾಚಾರ ಖಂಡಿಸಿ, ಗೋಕಾಕದಲ್ಲಿ ಕಲ್ಲು ತೂರಾಟ; ಅಘೋಷಿತ ಬಂದ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 17:57 IST
Last Updated 18 ಸೆಪ್ಟೆಂಬರ್ 2018, 17:57 IST
ಗೋಕಾಕದ ಶಹರ ಪೊಲೀಸ್‌ ಠಾಣೆ ಎದುರು ಮಂಗಳವಾರ ಸಂಜೆ ಉದ್ರಿಕ್ತ ಜನರು ಪ್ರತಿಭಟನೆ ನಡೆಸಿದರು
ಗೋಕಾಕದ ಶಹರ ಪೊಲೀಸ್‌ ಠಾಣೆ ಎದುರು ಮಂಗಳವಾರ ಸಂಜೆ ಉದ್ರಿಕ್ತ ಜನರು ಪ್ರತಿಭಟನೆ ನಡೆಸಿದರು   

ಗೋಕಾಕ:ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ತಮಗೊಪ್ಪಿಸಬೇಕೆಂದು ಇಲ್ಲಿನ ಪೊಲೀಸ್‌ ಠಾಣೆ ಎದುರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದ ಉದ್ರಿಕ್ತ ಜನರು, ಕಲ್ಲು ತೂರಾಟ ನಡೆಸಿದರು. 3 ಬಸ್‌, 1 ಕಾರು ಹಾಗೂ ಬಸ್‌ ನಿಲ್ದಾಣದ ಗಾಜುಗಳು ಪುಡಿಪುಡಿಯಾಗಿವೆ. ಇದರಿಂದ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.

ನಗರದಲ್ಲಿ ಭಾನುವಾರ ಆರೋಪಿ ಬಸವರಾಜ ಭೋಸಲೆ (22) ಬಾಲಕಿಯನ್ನು ಪುಸಲಾಯಿಸಿ, ಅತ್ಯಾಚಾರ ನಡೆಸಿದ್ದ ಎಂದು ದೂರು ದಾಖಲಾಗಿತ್ತು. ಮಂಗಳವಾರ ಆರೋಪಿಯನ್ನು ಬಂಧಿಸಿದ ಪೊಲೀಸರು ಠಾಣೆಯಲ್ಲಿ ಇಟ್ಟಿದ್ದರು. ವಿಷಯ ತಿಳಿದ ಬಾಲಕಿಯ ಸಂಬಂಧಿಕರು ಹಾಗೂ ಸಾರ್ವಜನಿಕರು ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಹಂತದಲ್ಲಿ ಪೊಲೀಸರು ಹಾಗೂ ಉದ್ರಿಕ್ತರ ಜೊತೆ ವಾಗ್ವಾದ ನಡೆಯಿತು. ಅಲ್ಲಿಂದ ಹೊರಬಂದ ಉದ್ರಿಕ್ತರು, ರಸ್ತೆಯ ಮೇಲೆ ಹೊರಟಿದ್ದ 3 ಸಾರಿಗೆ ಬಸ್‌ಗಳತ್ತ ಹಾಗೂ ಒಂದು ಕಾರಿನತ್ತ ಕಲ್ಲು ತೂರಿದರು. ಸಮೀಪದಲ್ಲಿಯೇ ಇದ್ದ ಬಸ್‌ ನಿಲ್ದಾಣದ ಗಾಜುಗಳಿಗೂ ಕಲ್ಲು ತೂರಿದರು. ಘಟನೆಯಿಂದ ವಿಚಲಿತರಾದ ಅಕ್ಕಪಕ್ಕದ ವ್ಯಾಪಾರಸ್ಥರು, ಅಂಗಡಿಗಳನ್ನು ಬಂದ್‌ ಮಾಡಿದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಉದ್ರಿಕ್ತರನ್ನು ಚದುರಿಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.