ಬೆಳಗಾವಿ: ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ, ಡೋಣಿ–ಗದಗ ನಂದವೇರಿ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಪರಿಸರಾಸಕ್ತರು, ರೈತ ಸಂಘದ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ತಮ್ಮ ಬೇಡಿಕೆ ಈಡೇರಿಸುವಂತೆ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಿದರು. ‘ಅಪರೂಪದ ಔಷಧೀಯ ಸಸ್ಯ, ಪ್ರಾಣಿ–ಪಕ್ಷಿಗಳ ಆಗರವಾಗಿರುವ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಬಿಡೆವು’ ಎಂದು ಘೋಷಣೆ ಕೂಗಿದರು.
ಶಿವಕುಮಾರ ಸ್ವಾಮೀಜಿ, ‘80 ಸಾವಿರ ಎಕರೆ ವ್ಯಾಪ್ತಿಯ ಕಪ್ಪತಗುಡ್ಡ ಅಮೂಲ್ಯವಾದ ಜೀವವೈವಿಧ್ಯ ಮತ್ತು ಸಸ್ಯವೈವಿಧ್ಯ ಹೊಂದಿದೆ. ಸರ್ಕಾರ ಯಾವುದೇ ಕಾರಣಕ್ಕೂ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದೆ, ಗುಡ್ಡವನ್ನು ಉಳಿಸಿ, ಬೆಳೆಸಬೇಕು. ಈಗಾಗಲೇ ಬಳ್ಳಾರಿ, ಸಂಡೂರ ಗುಡ್ಡ ಕಳೆದುಕೊಂಡಿದ್ದೇವೆ. ಈಗ ಕಪ್ಪತಗುಡ್ಡದಲ್ಲೂ ಪರಿಸರಕ್ಕೆ ಹಾನಿಯಾಗಲು ಬಿಡುವುದಿಲ್ಲ’ ಎಂದರು.
‘ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಕು’ ಎಂದೂ ಒತ್ತಾಯಿಸಿದರು.
ಹೋರಾಟಗಾರ ರುದ್ರಣ್ಣ ಗುಳಗುಳಿ, ‘ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಪ್ರಸ್ತಾವವನ್ನು ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ವೇಳೆ, ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ಮುಖಂಡರಾದ ಶಂಕರ ಕುಂಬಿ, ಸರಸ್ವತಿ ಪೂಜಾರ, ಕೆ.ಎಚ್.ನಾಯಿಕ, ಆರ್.ಜಿ.ತಿಮ್ಮಾಪುರ, ಲಿನ್ನೆಟ್ ಡಿಸಿಲ್ವಾ, ಸಪ್ನಾ ಕರಬಶೆಟ್ಟರ, ಪ್ರಮೀಳಾ ಜಕ್ಕನ್ನವರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.