ಬೆಳಗಾವಿ: ‘ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್)ದ ಬೆಳವಣಿಗೆಯಲ್ಲಿ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ಕೊಡುಗೆ ಅಪಾರವಾಗಿದೆ’ ಎಂದು ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಮರಿಸಿದರು.
ಇಲ್ಲಿನ ಬೆಮುಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಹೆಮ್ಮೆಯ ನಟರಾಗಿದ್ದ ಅವರಿಗೆ ವೈಯಕ್ತಿಕವಾಗಿ, ಕರ್ನಾಟಕದ ಹಾಲು ಮಹಾಮಂಡಳ ಹಾಗೂ 14 ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಪರವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ. ಕೆಎಂಎಫ್ ಬೆಳೆಯಲು ವರನಟ ರಾಜಕುಮಾರ್ ಕುಟುಂಬದ ಪಾತ್ರ ದೊಡ್ಡದಿದೆ’ ಎಂದು ನೆನೆದರು.
‘ಪುನೀತ್ ಅವರನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರು ಸಿನಿಮಾ ರಂಗಕ್ಕೆ ಬರುವುದಕ್ಕಿಂತ ಮುಂಚಿನಿಂದಲೂ ಅವರೊಂದಿಗೆ ನನ್ನ ಒಡನಾಟವಿತ್ತು. ಬೆಂಗಳೂರಿನಲ್ಲಿ ಭೇಟಿಯಾಗುತ್ತಿದ್ದೆವು. ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು’ ಎಂದು ಗದ್ಗದಿತರಾದರು.
‘ಅವರು ಕೆಎಂಎಫ್‌ನ ‘ನಂದಿನಿ’ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಪ್ರತಿಫಲ ಬಯಸದೆ ಪ್ರಚಾರ ಮಾಡಿದ್ದರು. ವೈಯಕ್ತಿಕವಾಗಿಯೂ ಅವರನ್ನು ಇಷ್ಟಪಡುತ್ತಿದ್ದೆವು. ‘ಬೊಂಬೆ ಹೇಳುತೈತೆ’ ಹಾಡನ್ನು ಆಗಾಗ ಕೇಳುತ್ತಿರುತ್ತೇನೆ’ ಎಂದು ಕಂಬನಿ ಮಿಡಿದರು.
ಮಹಾಂತೇಶ ನಗರದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಹಾಲು ಮಹಾಮಂಡಳದಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಲಯದ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಪುನೀತ್ ನಿಧನದ ಸ್ಮರಣಾರ್ಥ ಮೊಟಕುಗೊಳಿಸಲಾಯಿತು. ಬಾಯ್ಲರ್ ಉದ್ಘಾಟನೆ ಮೊದಲಾದ ಕಾರ್ಯಕ್ರಮ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.