ADVERTISEMENT

PV Web Exclusive: ಆರ್‌ಜೆಗಳಾಗಲಿದ್ದಾರೆ ಹಿಂಡಲಗಾ ಕೈದಿಗಳು

ಎಫ್ಎಂ ರೇಡಿಯೊ ಸ್ಥಾಪನೆಗೆ ಕ್ರಮ

ಎಂ.ಮಹೇಶ
Published 29 ಏಪ್ರಿಲ್ 2021, 15:12 IST
Last Updated 29 ಏಪ್ರಿಲ್ 2021, 15:12 IST
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ   

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಎಫ್‌ಎಂ ರೇಡಿಯೊ ಸ್ಥಾಪಿಸಲು ಸಿದ್ಧತೆ ನಡೆದಿದ್ದು, ಕೆಲವು ಕೈದಿಗಳು ಆರ್‌ಜೆ (ರೇಡಿಯೊ ಜಾಕಿ)ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇಲಾಖೆಯ ಕೋರಿಕೆ ಮೇರೆಗೆ ಬೆಂಗಳೂರಿನ ಮೈಂಡ್‌ಟ್ರೀ ಸಾಫ್ಟ್‌ವೇರ್ ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಕಾರ್ಯಕ್ರಮದಲ್ಲಿ ಕೇಂದ್ರ ಸ್ಥಾಪನೆಗೆ ಅಗತ್ಯವಾದ ಅನುದಾನ ಒದಗಿಸುತ್ತಿದೆ. ಕಾರಾಗೃಹದ 10 ಮಂದಿ ಕೈದಿಗಳು ಹಾಗೂ ಸಿಬ್ಬಂದಿಯಲ್ಲಿ ಹತ್ತು ಮಂದಿಗೆ ತರಬೇತಿ ನೀಡಲು ಯೋಜಿಸಲಾಗಿದೆ. ಅವರು ಆರ್‌ಜೆಗಳಾಗಿ ಕಾರ್ಯಕ್ರಮ ನಡೆಸಿಕೊಡುವುದು ಮಾತ್ರವಲ್ಲದೆ, ಎಫ್‌ಎಂ ಕೇಂದ್ರದ ನಿರ್ವಹಣೆಯ ಜವಾಬ್ದಾರಿಯನ್ನೂ ನೋಡಿಕೊಳ್ಳಲಿದ್ದಾರೆ.

ತರಬೇತಿ: ಚುರುಕಾಗಿ ಮಾತನಾಡುವ, ಹಾಡುವ ಹಾಗೂ ಸಂವಹನ ಕಲೆಯ ಸಾಮರ್ಥ್ಯವಿರುವ ಕೈದಿಗಳನ್ನು ಆಯ್ಕೆ ಮಾಡಿ ಅವರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ತರಬೇತಿ ಕೊಡಿಸಲು ಯೋಜಿಸಲಾಗಿದೆ. ರೇಡಿಯೊ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವಿ ಆರ್‌ಜೆಗಳಿಂದ ತರಬೇತಿಗೆ ಉದ್ದೇಶಿಸಲಾಗಿದೆ.

ADVERTISEMENT

ಕೈದಿಗಳನ್ನು ತರಬೇತಿಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವುದಕ್ಕಾಗಿ ಭದ್ರತೆ ಹಾಗೂ ಎಸ್ಕಾರ್ಟ್ ವ್ಯವಸ್ಥೆ ಒದಗಿಸುವಂತೆ ಕಾರಾಗೃಹದಿಂದ ಪೊಲೀಸ್ ಇಲಾಖೆಯನ್ನು ಕೋರಲಾಗಿದೆ. ಕೊರೊನಾ ಪರಿಸ್ಥಿತಿ ಸುಧಾರಿಸಿದ ನಂತರ ತರಬೇತಿ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಾರ್ಯ ಆರಂಭವಾಗಿದೆ: ‘ಹಿಂಡಲಗಾ ಕಾರಾಗೃಹ ಎಫ್‌ಎಂ ಕೇಂದ್ರ ಸ್ಥಾಪನೆ ಕೆಲಸ ಪ್ರಗತಿಯಲ್ಲಿದೆ. ನಿಯಂತ್ರಣ ಕೊಠಡಿಯೊಂದಿದ್ದು ಅದನ್ನು ಎಫ್‌ಎಂ ರೇಡಿಯೊ ಕೇಂದ್ರವಾಗಿ ರೂಪಿಸಲಾಗುವುದು. ಕೆಲವು ಉಪಕರಣಗಳನ್ನು ಅಳವಡಿಸಲಾಗಿದೆ. ಕೈದಿಗಳೇ ರೇಡಿಯೊ ಜಾಕಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕಾಗಿ ಅವರಿಗೆ ತರಬೇತಿ ಕೊಡಿಸಲಾಗುವುದು. ಅವರೊಂದಿಗೆ ಸಿಬ್ಬಂದಿಯನ್ನೂ ಸಜ್ಜುಗೊಳಿಸಲಾಗುವುದು. ಬ್ಯಾರಕ್‌ಗಳಲ್ಲಿ ಈಗಾಗಲೇ 20 ಸೌಂಡ್‌ ಬಾಕ್ಸ್‌ಗಳನ್ನು ಇಡಲಾಗಿದೆ. ಕಾರಾಗೃಹದ ವ್ಯಾಪ್ತಿಗಷ್ಟೇ ಕೇಳಿಸುವ ಎಫ್‌ಎಂ ರೇಡಿಯೊ (ವೈಯರ್ಡ್‌ ಕನೆಕ್ಷನ್ ಅಥವಾ ನಿಲಯ ರೇಡಿಯೊ) ಇದಾಗಿರಲಿದೆ’ ಎಂದು ಸೂಪರಿಂಟೆಂಡೆಂಟ್ ಕೃಷ್ಣಕುಮಾರ್‌ ಮಾಹಿತಿ ನೀಡಿದರು.

‘ಹಾಡುಗಳ ಮೂಲಕ ಮನರಂಜನೆ ನೀಡುವುದು, ಸದ್ವಿಚಾರಗಳನ್ನು ತಿಳಿಸುವುದು ಮೊದಲಾದ ಕಾರ್ಯಕ್ರಮಗಳ ಮೂಲಕ ಕೈದಿಗಳ ಮನಪರಿವರ್ತನೆ ಮತ್ತು ಪುನಶ್ಚೇತನಕ್ಕೆ ಕೈಗೊಳ್ಳುತ್ತಿರುವ ಉಪ ಕ್ರಮಗಳಲ್ಲಿ ಎಫ್‌ಎಂ ರೇಡಿಯೊ ಯೋಜನೆ ಒಂದಾಗಿದೆ. ಅವರನ್ನು ನೋವು, ಹತಾಶೆಯಂತಹ ಮನಸ್ಥಿತಿಯಿಂದ ಹೊರತರುವ ಪ್ರಯತ್ನವೂ ಇದಾಗಿದೆ. ಕಾರಾಗೃಹದ ಕಾರ್ಯಕ್ರಮಗಳ ವೇಳಾಪಟ್ಟಿ ಮತ್ತು ಮಾಹಿತಿ ಪ್ರಕಟಿಸುವುದು, ದೇಶಭಕ್ತಿ ಗೀತೆ, ಜಾನಪದ ಗೀತೆಗಳು, ಭಾವಗೀತೆಗಳನ್ನು ಹಾಕುವುದು ಅಥವಾ ಹಾಡುವುದನ್ನು ಆರ್‌ಜೆಗಳು ಮಾಡುತ್ತಾರೆ’ ಎಂದು ತಿಳಿಸಿದರು.

‘ಶಿಕ್ಷೆ ಪೂರ್ಣಗೊಳಿಸಿದ ಬಳಿಕ ಕಾರಾಗೃಹದಿಂದ ಬಿಡುಗಡೆ ಆಗುವವರು ಮುಂದಿನ ಜೀವನದಲ್ಲಿ ಸನ್ನಡತೆ ರೂಢಿಸಿಕೊಳ್ಳಬೇಕು. ಇದಕ್ಕೆ ಇಲ್ಲಿಯೇ ಅವರ ಮನಸ್ಥಿತಿಯನ್ನು ಸಜ್ಜುಗೊಳಿಸಲು ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ’ ಎನ್ನುತ್ತಾರೆ ಅವರು.

ಈ ಕಾರಾಗೃಹದಲ್ಲಿ 900 ಮಂದಿ ಕೈದಿಗಳಿದ್ದಾರೆ.

ಮೈಸೂರು ಕಾರಾಗೃಹದಲ್ಲೂ ಎಫ್‌ಎಂ ರೇಡಿಯೊ ಕೇಂದ್ರ ಸ್ಥಾಪನೆಗೆ ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.