ಚನ್ನಮ್ಮನ ಕಿತ್ತೂರು: ಆಹ್ಲಾದಕರ ಪರಿಸರ. ಗುಣಮಟ್ಟದ ಶಿಕ್ಷಣ. ರಾಜ್ಯಮಟ್ಟದಲ್ಲಿ ವಿದ್ಯಾರ್ಥಿನಿ ಸಾಧನೆ. ನೂರಕ್ಕೆ ನೂರರಷ್ಟು ಫಲಿತಾಂಶದಿಂದ ಪಾಲಕರು ಮತ್ತು ಅಧಿಕಾರಿಗಳ ಗಮನಸೆಳೆದಿರುವುದು ತಾಲ್ಲೂಕಿನ ಕುಲವಳ್ಳಿ ಗುಡ್ಡದ ಕತ್ರಿದಡ್ಡಿಯ ಸರ್ಕಾರಿ ಪ್ರೌಢಶಾಲೆ.
ಎರಡು ದಶಕದ ಹಿಂದೆ ಕುಲವಳ್ಳಿ ಗುಡ್ಡ ಸೇರಿ ಒಂಬತ್ತು ಹಳ್ಳಿಗಳ ಮಕ್ಕಳು ಪ್ರೌಢಶಾಲಾ ಶಿಕ್ಷಣ ಪಡೆದರೆ ಅದೇ ದೊಡ್ಡ ಸಾಧನೆ ಎಂದು ಪಾಲಕರು ತಿಳಿದುಕೊಂಡಿದ್ದರು. ಆದರೆ, ಇಂದಿನ ಮಕ್ಕಳು ಈಗ ಕಾಲೇಜು ಶಿಕ್ಷಣ ಪಡೆಯುತ್ತಿರುವುದು ಅವರಲ್ಲೂ ಅಭಿಮಾನ ಮೂಡಿಸಿದೆ.
‘ಕುಲವಳ್ಳಿ, ಮಾಚಿ, ಪ್ಲಾಂಟೇಶನ್, ಗಂಗ್ಯಾನಟ್ಟಿ, ಸಾಗರ, ನಿಂಗಾಪುರ, ಕತ್ರಿದಡ್ಡಿ, ದಿಂಡಲಕೊಪ್ಪ ಹಾಗೂ ಗಲಗಿನಮಡ ಎಂಬ ಪುಟ್ಟ ಜನವಸತಿ ಕೇಂದ್ರದ ಸಮೂಹವೇ ಕುಲವಳ್ಳಿ ಗುಡ್ಡವಾಗಿದೆ. ಇವೆಲ್ಲ ಗ್ರಾಮಗಳಿಗೆ ಕೇಂದ್ರ ಸ್ಥಾನದಂತಿರುವ ಕತ್ರಿದಡ್ಡಿಗೆ ಪ್ರೌಢಶಾಲೆ ಮಂಜೂರಾಗಿ ಒಂದೂವರೆ ದಶಕ ಕಳೆದಿದೆ. ಅಕ್ಷರ ಕಲಿಕೆಯಿಂದಲೇ ದೂರವಾಗಿದ್ದ ಇಲ್ಲಿಯ ಬಹುತೇಕರು ಸಹಿ ಮಾಡುವ ಮಟ್ಟಕ್ಕೆ, ದಿನಪತ್ರಿಕೆ ಓದುವ ಮಟ್ಟಕ್ಕೆ ಬದಲಾಗಿದ್ದಾರೆ. ಸರ್ಕಾರಿ ಮತ್ತು ಖಾಸಗಿ ನೌಕರಿ ಮಾಡುತ್ತಿದ್ದಾರೆ. ಎರಡು ದಶಕಗಳ್ಲಾದ ಮಹತ್ವದ ಬದಲಾವಣೆ ಇದಾಗಿದೆ’ ಎಂದೂ ಗ್ರಾಮಸ್ಥರು ಅಭಿಮಾನದಿಂದ ನುಡಿಯುತ್ತಾರೆ.
14 ವಿದ್ಯಾರ್ಥಿಗಳಿಂದ ಆರಂಭ:‘2007ನೇ ಸಾಲಿನಲ್ಲಿ ಕತ್ರಿದಡ್ಡಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಯಿತು. 14 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆಗ ಕಿತ್ತೂರು ಶಾಸಕರಾಗಿದ್ದ ಸುರೇಶ ಮಾರಿಹಾಳ ಅವರ ಅಧಿಕಾರವಧಿಯಲ್ಲಿ 2012ರಲ್ಲಿ ಗ್ರಾಮಸ್ಥರ ಸಹಕಾರದಿಂದ ನೂತನ ಶಾಲೆ ಕಟ್ಟಡ ತಲೆಯೆತ್ತಿ ನಿಂತಿತು. ಹಂತ, ಹಂತವಾಗಿ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳ ನಿರ್ಮಾಣವಾದವು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 248 ದಾಖಲಾತಿ ಇದೆ. ಮೇಲುಗೈ ಇರುವುದು ವಿದ್ಯಾರ್ಥಿನಿಯರದ್ದು. 127 ವಿದ್ಯಾರ್ಥಿನಿಯರು ಇದ್ದಾರೆ’ ಎಂದು ಶಿಕ್ಷಕ ಎಂ.ಪಿ. ಕದಂ ಮಾಹಿತಿ ನೀಡಿದರು.
ಶೇ 100 ಫಲಿತಾಂಶ:‘ಅಗತ್ಯಕ್ಕೆ ತಕ್ಕಂತೆ ಕೊಠಡಿಗಳು, ಅತಿಥಿ ಶಿಕ್ಷಕರು ಸೇರಿ ಪೂರ್ಣ ಪ್ರಮಾಣದ ಬೋಧಕ ಸಿಬ್ಬಂದಿ ಇದ್ದಾರೆ. ಪ್ರಾರಂಭವಾದ ವರ್ಷದಿಂದ ಹಿಡಿದು ಇಲ್ಲಿಯ ವರೆಗೆ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿದೆ. ನುರಿತ ಶಿಕ್ಷಕ ಸಮೂಹವು ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗೆ ಹೆಚ್ಚು ಗಮನಹರಿಸುತ್ತಾ ಬಂದಿದ್ದಾರೆ.
ಪ್ರೊಜೆಕ್ಟರ್, ಸ್ಮಾರ್ಟ್ ಬೋರ್ಡ್, ಕಂಪ್ಯೂಟರ್, ಟೇಬಲ್, ಕುರ್ಚಿಗಳು, ಫ್ಯಾನ್, ಊಟದ ತಟ್ಟೆ, ಕ್ಯಾಸಿಯೋ ಸೇರಿ ಅನೇಕ ಉಪಯೋಗಿ ವಸ್ತುಗಳನ್ನು ಗ್ರಾಮಸ್ಥರು ದಾನವಾಗಿ ಶಾಲೆ ನೀಡಿದ್ದಾರೆ’ ಎಂದರು.
‘ಪ್ರೌಢಶಾಲೆಗೆ ಕಾಂಪೌಂಡ್ ನಿರ್ಮಿಸಬೇಕು. ಗುಡ್ಡದ ಸಮೂಹ ಗ್ರಾಮಗಳ ವಿದ್ಯಾರ್ಥಿಗಳಿಗೆ ಪಿಯು ಕಾಲೇಜು ತೆರೆದರೆ ಹೆಚ್ಚು ಒಳ್ಳೆಯದಾಗುತ್ತದೆ’ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ.
ಆದರ್ಶ ಶಾಲೆ ಪ್ರಶಸ್ತಿ
‘ಉತ್ತಮ ಫಲಿತಾಂಶ, ಪರಿಸರ ಮತ್ತು ಗುಣಮಟ್ಟದ ಶಿಕ್ಷಣ ನೀಡಿರುವುದನ್ನು ಗಮನಿಸಿ ಶಾಲೆಗೆ 2012ರಲ್ಲಿ ಜಿಲ್ಲಾ ಮಟ್ಟದ ಆದರ್ಶ ಶಾಲೆ ಪ್ರಶಸ್ತಿ ಲಭಿಸಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಹಳದಿ ಮತ್ತು ಹಸಿರು ಶಾಲೆ ಪ್ರಶಸ್ತಿ ನೀಡಿ ಗೌರವಿಸಿದೆ. ‘ಪೆಟ್ರೋಲಿಯಂ ಕನ್ಸರ್ವೇಷನ್ ರಿಸರ್ಚ್ ಸಂಸ್ಥೆ’ಯು ಶಾಲೆಯನ್ನು ಆಯ್ಕೆ ಮಾಡಿದೆ. ‘ಇಕೋ ಕ್ಲಬ್’ ಅಡಿ ಪೂರಕ ಚಟುವಟಿಕೆಗಳನ್ನು ಆ ಸಂಸ್ಥೆಯವರು ಹಮ್ಮಿಕೊಳ್ಳುತ್ತಿದ್ದಾರೆ’ ಎಂದು ಎಂ.ಪಿ. ಕದಂ ತಿಳಿಸಿದರು.
‘ಪೇರಲ, ತೆಂಗು, ತೇಗು, ನುಗ್ಗೆ, ಔಷಧಿ ಸಸ್ಯಗಳನ್ನು ಶಾಲೆ ಮೈದಾನದ ಬದಿಯಲ್ಲಿ ಬೆಳೆದು ಪೋಷಿಸಲಾಗುತ್ತಿದೆ. ನರೇಗಾ ಯೋಜನೆಯಡಿ ಮೈದಾನ ಸಮತಟ್ಟು ಮಾಡುವ ಮತ್ತು ಹೈಟೆಕ್ ಮಾದರಿ ಶೌಚಾಲಯ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿವೆ’ ಎಂದು ಅವರು ವಿವರಿಸಿದರು.
ಸಾಧನೆ
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ರಾಜ್ಯಮಟ್ಟದ ನಡಿಗೆ ಸ್ಪರ್ಧೆಯಲ್ಲಿ ಬಾಳವ್ವ ಘೋಡಗೇರಿ ಭಾಗವಹಿಸಿ ಕೀರ್ತಿ ಹೆಚ್ಚಿಸಿದ್ದಾರೆ.
– ಕೆ.ಎಂ. ಕಾಳೆ, ಮುಖ್ಯ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.