ADVERTISEMENT

ಮನೆಗಳಿಗೆ ನುಗ್ಗಿದ ನೀರು; ಆಕ್ರೋಶ

ಪೀರನವಾಡಿ ಪಟ್ಟಣ ಪಂಚಾಯ್ತಿ ಕಚೇರಿಗೆ ಜನರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 15:32 IST
Last Updated 24 ಜುಲೈ 2024, 15:32 IST
ಬೆಳಗಾವಿ ತಾಲ್ಲೂಕಿನ ಪೀರನವಾಡಿಯಲ್ಲಿ ಮನೆಗೆ ನೀರು ನುಗ್ಗಿತು –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ ತಾಲ್ಲೂಕಿನ ಪೀರನವಾಡಿಯಲ್ಲಿ ಮನೆಗೆ ನೀರು ನುಗ್ಗಿತು –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಹಲವು ಅವಾಂತರ ಸೃಷ್ಟಿಸಿದೆ.

ಸತತ ಮಳೆಯಿಂದಾಗಿ ನಗರದ ಹೊರವಲಯದ ಬಸವನ ಕುಡಚಿಯ ಹಲವು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿ, ಜನರು ಪರದಾಡುವಂತಾಯಿತು. ಕೆಎಲ್‌ಇ ಸಂಕಲ್ಪ ವೆಲ್‌ನೆಸ್‌ ಸೆಂಟರ್‌ಗೆ ಸಹ ನೀರು ನುಗ್ಗಿದ ಪರಿಣಾಮ ಔಷಧಗಳು ಮತ್ತು ವೈದ್ಯಕೀಯ ಪರಿಕರಗಳಿಗೆ ಹಾನಿಯಾಯಿತು. ಈ ನೀರು ಹೊರಹಾಕಲು ಮಹಾನಗರ ಪಾಲಿಕೆಯವರು ಬುಧವಾರ ಬೆಳಿಗ್ಗೆಯಿಂದ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದು ಕಂಡುಬಂತು.

‘ವಾರದಿಂದ ನಮ್ಮಲ್ಲಿ ಸತತ ಮಳೆಯಾಗುತ್ತಿದೆ. ಈ ಹಿಂದೆ ದೇವರಾಜ ಅರಸ್‌ ಕಾಲೊನಿಯಿಂದ ಮಳೆನೀರು ನೀರು ಹರಿದುಹೋಗಿ ಬಳ್ಳಾರಿ ನಾಲೆ ಸೇರುತ್ತಿತ್ತು. ಆದರೆ, ಚರಂಡಿಗಳೆಲ್ಲ ಬ್ಲಾಕ್‌ ಆಗಿದ್ದರಿಂದ ಬಸವನ ಕುಡಚಿಗೆ ನೀರು ನುಗ್ಗಿ ನಾವು ತೊಂದರೆ ಅನುಭವಿಸುವಂತಾಗಿದೆ’ ಎಂದು ವ್ಯಾಪಾರಿ ದೇವಪ್ಪ ಕಡೇಮನಿ ಅವಲತ್ತುಕೊಂಡರು.

ADVERTISEMENT

ಪೀರನವಾಡಿಯಲ್ಲೂ ಸಮಸ್ಯೆ: ಪೀರನವಾಡಿಯ ಸಿದ್ಧೇಶ್ವರ ಗಲ್ಲಿ, ಲಕ್ಷ್ಮಿ ಗಲ್ಲಿ, ಪಾಟೀಲ ಗಲ್ಲಿ, ಮಹಾವೀರ ಗಲ್ಲಿಯಲ್ಲಿ 20ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ್ದ ಮಳೆ ನೀರು ಹೊರಹಾಕಲು ಜನರು ಪ್ರಯಾಸಪಟ್ಟರು.‌

‘ನಮ್ಮ ಮನೆಗೆ ನೀರು ನುಗ್ಗಿ ತೊಂದರೆಯಾದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿ ಪಟ್ಟಣ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

‘ನಾಲ್ಕೈದು ವರ್ಷಗಳಿಂದ ಮಳೆನೀರು ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಪೀಠೋಪಕರಣಗಳಿಗೆ ಹಾನಿಯಾಗಿದೆ. ಆದರೆ, ಪಟ್ಟಣ ಪಂಚಾಯ್ತಿಯವರು ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸುತ್ತಿಲ್ಲ’ ಎಂದು ಪೀರನವಾಡಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೇಶವ ಪೋಳ ದೂರಿದರು.

‘ಮಳೆ ನೀರು ಹರಿದು ಹೋಗುವ ಮಾರ್ಗದಲ್ಲಿ ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಮತ್ತೊಂದೆಡೆ ಮಳೆ ನೀರು ಹರಿದುಹೋಗಲು ಪಟ್ಟಣ ಪಂಚಾಯ್ತಿಯವರು ವ್ಯವಸ್ಥೆ  ಮಾಡಿಲ್ಲ. ಹಾಗಾಗಿ ನಮ್ಮ ಮನೆಗೆ ನೀರು ನುಗ್ಗುತ್ತಿದೆ. ಮಳೆನೀರು ನುಗ್ಗಿ ಪ್ರತಿವರ್ಷ ತಲೆದೋರುವ ಸಮಸ್ಯೆಯಿಂದ ಹೆತ್ತವರಿಬ್ಬರು ಮೃತಪಟ್ಟರು. ಆದರೂ, ಸಂಕಷ್ಟ ಕೊನೆಗಾಣುತ್ತಿಲ್ಲ’ ಎಂದು ಸರಸ್ವತಿ ಕುಲಕರ್ಣಿ ಸಮಸ್ಯೆ ಹೇಳಿಕೊಂಡರು.

ಬೆಳಗಾವಿ ತಾಲ್ಲೂಕಿನ ಪೀರನವಾಡಿಯಲ್ಲಿ ಮನೆಗೆ ನೀರು ನುಗ್ಗಿತು –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ ಹೊರವಲಯದ ಬಸವನ ಕುಡಚಿಯಲ್ಲಿ ಮಳೆ ನೀರು ಹರಿದುಹೋಗಲು ವ್ಯವಸ್ಥೆ ಮಾಡಲಾಯಿತು

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.