ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶುಕ್ರವಾರ ರಾಜ್ಯೋತ್ಸವದ ವೈಭವ ಮೈನವಿರೇಳಿಸಿತು. ಜಿಲ್ಲೆಯ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಹಾಡಿ, ಕುಣಿದು, ಕನ್ನಡಮ್ಮನ ತೇರು ಎಳೆದರು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಂತೂ ಕನ್ನಡಿಗರ ಸಡಗರ ಜಲಪಾತದಂತೆ ಭೋರ್ಗರೆಯಿತು.
ಗುರುವಾರ ತಡರಾತ್ರಿ 12ಕ್ಕೆ ರಾಜ್ಯೋತ್ಸವ ಆಚರಣೆ್ಗೆ ಚಾಲನೆ ನೀಡಲಾಯಿತು. ರಾತ್ರಿಯಿಡೀ ಯುವಜನರು ಕುಣಿದು– ಕುಪ್ಪಳಿಸಿದರು. ಶುಕ್ರವಾರ ಸೂರ್ಯೋದಯ ಆಗುವಷ್ಟರಲ್ಲಿ ಜನಸಾಗರವೇ ಹರಿದುಬಂತು. ವೃತ್ತದ ನಾಲ್ಕೂ ದಿಕ್ಕಿನ ರಸ್ತೆಗಳಲ್ಲಿ ಜನ ಕಿಕ್ಕಿರಿದು ಸೇರಿದರು. ಹಳದಿ–ಕೆಂಪು ಬಾವುಟಗಳು ರಾರಾಜಿಸಿದವು.
ಸಂಘಟನೆಗಳ ಯುವಕರು ಲಾರಿ, ಟ್ರ್ಯಾಕ್ಟರ್, ಟೆಂಪೊಗಳಿಗೆ ಅಲಂಕಾರ ಮಾಡಿ, ಡಾಲ್ಬಿಗಳನ್ನು ಕಟ್ಟಿಕೊಂಡು ವಿದ್ಯುದ್ದೀಪಾಲಂಕಾರ ಮಾಡಿ ಸಂಭ್ರಮಿಸಿದರು. ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು...’ ಹಾಡು ತೇಲಿಬಂದಾಗ ಕನ್ನಡಿಗರ ಹರ್ಷದ ಕಟ್ಟೆ ಒಡೆಯಿತು.
ಜಿಲ್ಲಾಡಳಿತ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಎತ್ತಿನಬಂಡಿಯಲ್ಲಿ ಭುವನೇಶ್ವರಿಯ ಪ್ರತಿಮೆ ಮೆರವಣಿಗೆ ಮಾಡಲಾಯಿತು. ಪಂಪ, ರನ್ನ, ಪೊನ್ನ, ಚಂಪ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವು ರೂಪಕಗಳು ಕಣ್ಮನ ಸೆಳೆದವು.
ಇಡೀ ದಿನ ನಡೆದ ಮೆರವಣಿಗೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಸೇರಿದರು. ನಾಡಿನ ಕವಿಗಳು, ಜ್ಞಾನಪೀಠ ಪುರಸ್ಕೃತರು, ಅರಸರು, ರಾಣಿಯರು, ಪ್ರವಾಸಿ ತಾಣಗಳ ರೂಪಕ ಹಾಗೂ ಸ್ತಬ್ಧ ಚಿತ್ರಗಳು ಗಮನ ಸೆಳೆದವು.
ಚಿಕ್ಕೋಡಿಯಲ್ಲಿ ಸಡಗರದ ರಾಜ್ಯೋತ್ಸವ
ಚಿಕ್ಕೋಡಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಚಿಕ್ಕೋಡಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಬೃಹತ್ ವೇದಿಕೆಯಲ್ಲಿ ಪಟ್ಟಣದ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹಾಡುಗಳಿಗೆ ಹೆಜ್ಜೆ ಹಾಕಿ ಗಡಿಭಾಗದಲ್ಲಿ ಕನ್ನಡತನಕ್ಕೆ ಸಾಕ್ಷಿಯಾದರು.
ಶಾಸಕ ಗಣೇಶ ಹುಕ್ಕೇರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ, ಉಪಾಧ್ಯಕ್ಷ ಇರ್ಫಾನ್ ಬೇಪಾರಿ, ತಹಶೀಲ್ದಾರ ಚಿದಂಬರ ಕುಲಕರ್ಣಿ, ಪುರಸಭೆ ಸದಸ್ಯರಾದ ಅನಿಲ ಮಾನೆ, ರಾಮಾ ಮಾನೆ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಸಿಪಿಐ ವಿಶ್ವನಾಥ ಚೌಗಲಾ, ಕರವೇ ತಾಲ್ಲೂಕು ಅಧ್ಯಕ್ಷ ಸಂಜು ಬಡಿಗೇರ, ರವಿ ಮಾಳಿ, ಪ್ರಭಾಕರ ಐ ಕೋರೆ, ಬಿಇಒ ಬಿ.ಎ ಮೇಕನಮರಡಿ, ಟಿರಚ್‍ಒ ಸುಕುಮಾರ ಭಾಗಾಯಿ ಮತ್ತಿತರರು ಇದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ತಯಾರಿಸಿದ ಪ್ರಾತ್ಯಕ್ಷಿಕೆಗಳನ್ನು ಹಾಗೂ ಎತ್ತಿನ ಗಾಡಿ ಯಲ್ಲಿ ಭುವನೇಶ್ವರಿದೇವಿಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯು ಪಟ್ಟಣದ ಆರ್.ಡಿ ಹೈಸ್ಕೂಲಿನಿಂದ ಪ್ರಾರಂಭವಾಗಿ ನಿಪ್ಪಾಣಿ-ಮುಧೋಳ ರಸ್ತೆ ಮೂಲಕ ಬಸವೇಶ್ವರ ವೃತ್ತ, ಅಂಕಲಿಕೂಟ, ಗಣಪತಿ ಪೇಠ, ಕಿತ್ತೂರು ಚನ್ನಮ್ಮ ರಸ್ತೆ, ಕೇಂದ್ರ ಬಸ್ ನಿಲ್ದಾಣದ ಮೂಲಕ ಆರ್ ಡಿ ಹೈಸ್ಕೂಲ್ ಮೈದಾನ ತಲುಪಿತು.
ನಿಯಮ ಉಲ್ಲಂಘಿಸಿ ಎಂಇಎಸ್ ರ್‍ಯಾಲಿ
ರಾಜ್ಯೋತ್ಸವ ವಿರೋಧಿಸಿ ಇಲ್ಲಿನ ಎಂಇಎಸ್ ಕೆಲವು ಮುಖಂಡರು ಜಾಥಾ, ಬೈಕ್ ರ್‍ಯಾಲಿ ನಡೆಸಿದರು. ಕಪ್ಪು ಬಾವುಟಗಳನ್ನೂ ಹಾರಿಸಿದರು.
ಸಂಭಾಜಿ ಉದ್ಯಾನದಿಂದ ಆರಂಭಗೊಂಡು ಮಾಧವ್ ರಸ್ತೆ, ಎಸ್‌ಪಿಎಂ ರಸ್ತೆ, ಶಹಾಪುರ, ನಾಥಪೈ ಸರ್ಕಲ್, ಗೋವಾವೇಸ್ ಮಾರ್ಗವಾಗಿ ಮರಾಠಾ ಮಂದಿರ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.