ಬೆಳಗಾವಿ: ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವೈಭವದಿಂದ ನಡೆದ ರೂಪಕ ವಾಹನಗಳ ಮೆರವಣಿಗೆ ಶುಕ್ರವಾರ ತಡರಾತ್ರಿ ಮುಕ್ತಾಯವಾಯಿತು. ಸತತ 24 ತಾಸಿಗೂ ಅಧಿಕ ಹೊತ್ತು ಪೊಲೀಸರು ಸಮರ್ಥವಾಗಿ ಕೆಲಸ ಮಾಡಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದರು.
ರಾಜ್ಯೋತ್ಸವದ ಮುನ್ನಾದಿನವಾದ ಗುರುವಾರ ಮಧ್ಯರಾತ್ರಿಯೇ ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ‘ಕನ್ನಡ ಹಬ್ಬ’ದ ಆಚರಣೆಗೆ ಚಾಲನೆ ಸಿಕ್ಕಿತು. ಶುಕ್ರವಾರ ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಅದ್ದೂರಿ ಮೆರವಣಿಗೆ ನಡೆಯಿತು. ಬೆಳಗಾವಿ ಮಾತ್ರವಲ್ಲದೆ; ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 5 ಲಕ್ಷಕ್ಕೂ ಅಧಿಕ ಜನರು, ಮೆರವಣಿಗೆಯಲ್ಲಿ ಭಾಗವಹಿಸಿ ನಾಡಾಭಿಮಾನ ಮೆರೆದರು. ಕನ್ನಡ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು.
ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯೂ ಕರಾಳ ದಿನ ಆಚರಿಸಿತು. ಅಂದೇ ದೀಪಾವಳಿ ಹಬ್ಬದ ಆಚರಣೆಯೂ ಇತ್ತು.
ಭದ್ರತೆಗಾಗಿ ನಗರದಲ್ಲಿ 2,200 ಪೊಲೀಸರನ್ನು ನಿಯೋಜಿಸಲಾಗಿತ್ತು. ಅವರು ಪ್ರತಿ ಚಟುವಟಿಕೆ ಮೇಲೂ ನಿಗಾ ವಹಿಸಿದ್ದರು. ಸಣ್ಣ–ಪುಟ್ಟ ವಾಗ್ವಾದ ಬಿಟ್ಟರೆ, ಇಡೀ ರಾಜ್ಯೋತ್ಸವದ ಆಚರಣೆ ಯಶಸ್ವಿಯಾಗಿ ನಡೆಯಿತು. ಪೊಲೀಸರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.