ADVERTISEMENT

ರಾಮದುರ್ಗ ಸರ್ಕಾರಿ ಆಸ್ಪತ್ರೆ; ವೈದ್ಯರ ಕೊರತೆ

16 ವೈದ್ಯರು ಅಗತ್ಯವಿದ್ದರೂ, ಇರುವುದು ಮಾತ್ರ ಆರು ಮಂದಿ

ಚನ್ನಪ್ಪ ಮಾದರ
Published 8 ಜುಲೈ 2024, 4:31 IST
Last Updated 8 ಜುಲೈ 2024, 4:31 IST
ರಾಮದುರ್ಗದ ಸರ್ಕಾರಿ ಆಸ್ಪತ್ರೆ
ರಾಮದುರ್ಗದ ಸರ್ಕಾರಿ ಆಸ್ಪತ್ರೆ   

ರಾಮದುರ್ಗ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರ ಆರೋಗ್ಯ ಕಾಪಾಡಬೇಕಾದ ಇಲ್ಲಿನ ಸರ್ಕಾರಿ ಆಸ್ಪತ್ರೆಯು ವೈದ್ಯರಿಲ್ಲದೆ ರೋಗಗಸ್ಥವಾಗಿದೆ.

ಉಳ್ಳವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಬಡವರಿಗೆ ಸರ್ಕಾರಿ ಆಸ್ಪತ್ರೆಯೊಂದೇ ಗತಿ ಎಂಬಂತಾಗಿದೆ. ವೈದ್ಯರಿಲ್ಲದ ಕೊರಗು ಇನ್ನಿಲ್ಲದಂತೆ ಕಾಡುತ್ತಿದೆ. ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿಗೆ ಸರಿಯಾದ ಸಂಪರ್ಕ ಇಲ್ಲದ ಕಾರಣಕ್ಕೆ ಇಲ್ಲಿಗೆ ವೈದ್ಯರು ಬರಲು ಮುಂದಾಗುತ್ತಿಲ್ಲ ಎಂಬ ಆರೋಪ ಜನರದ್ದು.

ಪಕ್ಕದ ಸವದತ್ತಿ, ಬೈಲಹೊಂಗಲ, ಗೋಕಾಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ವೈದ್ಯರು ಇದ್ದಾರೆ. ಆದರೆ ಇಲ್ಲಿ, 16 ವೈದ್ಯರು ಅಗತ್ಯವಿದ್ದರೂ, ಇರುವುದು 6 ಮಂದಿ ವೈದ್ಯರು  ಮಾತ್ರ. ಎಲ್ಲ ವಿಭಾಗಗಳಲ್ಲೂ ಅವರೇ ಕೆಲಸ ಮಾಡಬೇಕಿದೆ.

ADVERTISEMENT

‘ಸುಮಾರು ₹1.5 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಪುನರ್‌ನಿರ್ಮಾಣ ಮಾಡಿ, ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. 100 ಹಾಸಿಗೆಗಳ ಸೌಲಭ್ಯವಿದೆ. ಇರುವ ವೈದ್ಯರಲ್ಲಿ ಕೆಲವರು ಹೊರ ರೋಗಿಗಳ ವಿಭಾಗದ ನೋಡಿಕೊಂಡರೆ, ಉಳಿದವರು ಬೇರೆ ಕಡೆ ಹೋಗುತ್ತಿದ್ದಾರೆ’ ಎನ್ನುವುದು ರೋಗಿಗಳ ಅಳಲು.

‘ಹೆರಿಗೆ ವಿಭಾಗದಲ್ಲಿ ಮಹಿಳಾ ವೈದ್ಯರೊಬ್ಬರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅರಿವಳಿಕೆ ತಜ್ಞರು ಇಲ್ಲ. ಹೆರಿಗೆಗೆ ಬರುವವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ತುರ್ತು ಸೇವೆಗಾಗಿ ದಿನಕ್ಕೊಬ್ಬರಂತೆ ವೈದ್ಯರು ಇರುತ್ತಾರೆ. ಸಣ್ಣ ಅಪಘಾತವಾದರೂ ಬೇರೆ ಆಸ್ಪತ್ರೆಗೆ ಕಳಿಸುವಂತಹ ಪರಿಸ್ಥಿತಿ ಮುಂದುವರಿದಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಶಂಕರ ಕಂಬಾರ.

ಆಸ್ಪತ್ರೆಗೆ ವೈದ್ಯರ ನೇಮಕವಾದರೂ ಕೆಲಸಕ್ಕೆ ಹಾಜರಾಗುತ್ತಿಲ್ಲ. ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ
ಡಾ. ನವೀನ ನಿಜಗುಲಿ, ತಾಲ್ಲೂಕು ವೈದ್ಯಾಧಿಕಾರಿ
ತಜ್ಷ ವೈದ್ಯರಿಲ್ಲದೆ ಜನರು ಬೇರೆ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ.
ಶಂಕರ ಕುಂಬಾರ, ರಾಮದುರ್ಗದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.