ನವಿಲುತೀರ್ಥ: ‘ಶಾಸಕ ರಮೇಶ ಜಾರಕಿಹೊಳಿ ಅವರಿಗೂ ನಮ್ಮ ಪಕ್ಷಕ್ಕೂ ಸಂಬಂಧವೇ ಇಲ್ಲ. ನಮ್ಮ ಇಬ್ಬರು ನಾಯಕರ ಮಧ್ಯೆ ವಿಷಬೀಜ ಬಿತ್ತಬೇಕು ಎಂಬುದೇ ಅವರ ರಾಜಕೀಯ ದುರುದ್ದೇಶ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು.
‘ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ನಿಯಂತ್ರಣದಲ್ಲಿದ್ದಾರೆ’ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ, ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಹಿಂದಿನಿಂದಲೂ ಬಹಳಷ್ಟು ಜನರು ಶಕುನಿ ರಾಜಕಾರಣ ಮಾಡಿದ್ದಾರೆ. ಇದಕ್ಕೆ ಯಾರೂ ಸೊಪ್ಪು ಹಾಕುವುದಿಲ್ಲ’ ಎಂದರು.
‘ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಮುತ್ಸದ್ಧಿ ರಾಜಕಾರಣಿಗಳು. ಹಲವು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಸಿದ್ದರಾಮಯ್ಯ ಅವರಿಗಿದೆ. ಶಿವಕುಮಾರ್ ಅವರೂ ಏಳು ಬಾರಿ ಶಾಸಕರಾಗಿದ್ದಾರೆ. ರಮೇಶ ಹೇಳಿಕೆಗೆ ಉತ್ತರ ಕೊಡುವಷ್ಟು ಯಾರೂ ಚಿಕ್ಕವರಿಲ್ಲ’ ಎಂದು ಟಾಂಗ್ ಕೊಟ್ಟರು.
‘ವಿಜಯೇಂದ್ರ ಹಾಗೂ ಶಿವಕುಮಾರ್ ಮಧ್ಯೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಿ, ‘ಯತ್ನಾಳ ಬಗ್ಗೆ ವೈಯಕ್ತಿಕ ಗೌರವವಿದೆ. ಆದರೆ, ಅವರ ರಾಜಕೀಯ ಹೇಳಿಕೆಗಳನ್ನು ಗಮನಿಸಿದರೆ ಅವರು ಸದಾ ಯಡಿಯೂರಪ್ಪ ವಿರುದ್ಧವೇ ಮಾತನಾಡುತ್ತಾರೆ. ತಮ್ಮ ಪಕ್ಷದ ಬಗ್ಗೆ ಮಾತನಾಡಲಿ. ಇನ್ನೊಂದು ಪಕ್ಷದವರ ಬಗ್ಗೆ ಏಕೆ ಮಾತನಾಡುತ್ತಾರೆ? ಗೊಂದಲ ಸೃಷ್ಟಿಸಲು ಹೀಗೆ ಮಾತನಾಡುತ್ತಾರೆ’ ಎಂದರು.
‘ಏಳು ತಿಂಗಳಿಗೆ ನಾವು ಹುಟ್ಟಿಲ್ಲ. ಕಿವಿಯಲ್ಲಿ ಯಾರೂ ಹೂವು ಇಟ್ಟುಕೊಂಡಿಲ್ಲ’ ಎಂದೂ ಅವರು ಖಾರವಾಗಿ ಪ್ರತಿಕ್ರಿಯಿಸಿದರು.
‘ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರದವರು ನಮ್ಮ ರಾಜ್ಯದ ಪಾಲಿನ ಅನುದಾನ ನೀಡದ ಬಗ್ಗೆ ಮೊದಲು ಯತ್ನಾಳ ಅವರು ಬೆಳಕು ಚೆಲ್ಲಲಿ. ಆದರೆ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಅವರು ಗೃಹಲಕ್ಷ್ಮಿ ಬಗ್ಗೆ ಮಾತನಾಡುತ್ತಿದ್ದಾರೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಗೊಳಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.