ADVERTISEMENT

ಸತತ 6ನೇ ಗೆಲುವು ದಾಖಲಿಸಿದ ರಮೇಶ್ ಜಾರಕಿಹೊಳಿ: ಫಲಿಸಿದ ಬಿಎಸ್‌ವೈ ತಂತ್ರ;

ಶ್ರೀಕಾಂತ ಕಲ್ಲಮ್ಮನವರ
Published 9 ಡಿಸೆಂಬರ್ 2019, 19:30 IST
Last Updated 9 ಡಿಸೆಂಬರ್ 2019, 19:30 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ಹಿಂದಿನ ಸಮ್ಮಿಶ್ರ ಸರ್ಕಾರ ಉರುಳಲು ಹಾಗೂ ಪ್ರಸ್ತುತ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ, ಗೋಕಾಕ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದರು.

ತಮ್ಮ ಪ್ರತಿಸ್ಪರ್ಧಿ, ಸಹೋದರ ಕಾಂಗ್ರೆಸ್‌ನ ಲಖನ್‌ ಜಾರಕಿಹೊಳಿ ಅವರನ್ನು ಹಿಂದಕ್ಕೆ ತಳ್ಳಿ, ಸತತ 6ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ‘ಜೋಳಿಗೆ’ ಹಿಡಿದು ಮತಗಳ ಭಿಕ್ಷಾಟನೆಗೆ ಇಳಿದಿದ್ದ ಜೆಡಿಎಸ್‌ನ ಅಶೋಕ ಪೂಜಾರಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಕ್ಷೇತ್ರದ ಮೇಲೆ ರಮೇಶ ಅವರು ಬಿಗಿ ಹಿಡಿತ ಹೊಂದಿರುವುದು ಮತ್ತೊಮ್ಮೆ ಸಾಬೀತಾಯಿತು. ಸಹೋದರರೇ ಪ್ರತಿಸ್ಪರ್ಧಿಯಾಗಿದ್ದರೂ, ಅವರು ಕಟ್ಟಿದ್ದ ಕೋಟೆಯನ್ನು ಭೇದಿಸಲಾಗಲಿಲ್ಲ. ಅವರಿಗೆ ಅಂಟಿಕೊಂಡಿದ್ದ ‘ಅನರ್ಹ’ ಪಟ್ಟ ಮತದಾರರ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಿದಂತಿಲ್ಲ.

ADVERTISEMENT

ಜಿಲ್ಲೆಯ ಇನ್ನಿಬ್ಬರು ‘ಅನರ್ಹ’ ಶಾಸಕರಾಗಿದ್ದ ಕಾಗವಾಡದ ಶ್ರೀಮಂತ ಪಾಟೀಲ ಹಾಗೂ ಅಥಣಿಯ ಮಹೇಶ ಕುಮಠಳ್ಳಿ ಕೂಡ ಜಯಗಳಿಸಿದ್ದು, ಬೆಳಗಾವಿ ಜಿಲ್ಲೆಯ ಎಲ್ಲ ಮೂರೂ ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.‌

ಫಲಿಸಿದ ಬಿಎಸ್‌ವೈ ತಂತ್ರ:ಗೋಕಾಕ ಕ್ಷೇತ್ರದ ರಮೇಶ ಜಾರಕಿಹೊಳಿ ಅವರು ವಾಲ್ಮೀಕಿ ಜನಾಂಗದವರು. ಕಾಗವಾಡದ ಶ್ರೀಮಂತ ಪಾಟೀಲ ಅವರು ಮರಾಠಾ ಸಮುದಾಯವರು. ಇವೆರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ– ಲಿಂಗಾಯತ ಮತದಾರರನ್ನು ಓಲೈಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಎರಡು ಬಾರಿ ಜಿಲ್ಲೆಗೆ ಆಗಮಿಸಿ, ತೀವ್ರ ಪ್ರಚಾರ ನಡೆಸಿದ್ದರು.

‘ಸ್ಥಳೀಯ ಅಭ್ಯರ್ಥಿಗಳನ್ನಲ್ಲ, ನನ್ನನ್ನು ನೋಡಿ ವೋಟ್‌ ಹಾಕಿ. ನನ್ನ ಸರ್ಕಾರ ಇನ್ನೂ ಮೂರುವರೆ ವರ್ಷ ಇರಬೇಕಾದರೆ, ಈ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ. ವೀರಶೈವ– ಲಿಂಗಾಯತ ಮತದಾರರ ಒಂದೂ ಮತ ಬೇರೆ ಕಡೆ ಹೋಗಬಾರದು’ ಎಂದು ಬಹಿರಂಗ ಸಭೆಯಲ್ಲಿ ಕರೆಕೊಟ್ಟರು. ಅವರ ಈ ಮಾತಿನಿಂದ ಚುನಾವಣಾ ಲೆಕ್ಕಾಚಾರವೇ ಬದಲಾಗಿ ಹೋಯಿತು.

ತಮ್ಮದೇ ಸಮುದಾಯದ ಅಭ್ಯರ್ಥಿಗಳಾದ ಜೆಡಿಎಸ್‌ನ ಅಶೋಕ ಪೂಜಾರಿ ಹಾಗೂ ಕಾಂಗ್ರೆಸ್‌ನ ರಾಜು ಕಾಗೆ ಅವರನ್ನು ಬಿಟ್ಟು, ವೀರಶೈವ– ಲಿಂಗಾಯತ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಕೈ ಹಿಡಿದರು. ಇವರ ಜೊತೆಗೆ ಯುವಕರು ಹಾಗೂ ಪಕ್ಷದ ಸಂಪ್ರದಾಯ ಮತದಾರರು ಬೆಂಬಲಿಸಿದ್ದರಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವು ಸುಲಭವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.