ADVERTISEMENT

ರಮೇಶ ಜಾರಕಿಹೊಳಿಗೆ ಕೋವಿಡ್: ಗೋಕಾಕ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 7:57 IST
Last Updated 5 ಏಪ್ರಿಲ್ 2021, 7:57 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಕೋವಿಡ್–19 ದೃಢಪಟ್ಟಿದ್ದು, ಗೋಕಾಕದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವೀಂದ್ರ ಅಂಟಿನ ತಿಳಿಸಿದರು.

ಗೋಕಾಕ ಆಸ್ಪತ್ರೆಯಲ್ಲಿ ಸೋಮವಾರ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ‘ಗುರುವಾರ ರಾತ್ರಿ ಬಂದಿದ್ದ ಅವರು, ಮಹಾರಾಷ್ಟ್ರಕ್ಕೆ ಹೋಗಿ ವಾಪಸಾಗಿದ್ದರಿಂದ ಜ್ವರ ಮತ್ತು ಕೆಮ್ಮು ಇದೆ ಎಂದಿದ್ದರು. ಅವರನ್ನು ರ‍್ಯಾಪಿಡ್ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್–19 ಬಂದಿರುವುದು ದೃಢ‍ಪಟ್ಟಿತ್ತು.

ಚಿಕಿತ್ಸೆ ನೀಡಿದ್ದ ವೈದ್ಯರು, ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಅವರಿಗೆ ತಿಳಿಸಿ ಕಳುಹಿಸಿದ್ದರು. ಭಾನುವಾರ ರಾತ್ರಿ 10.30ರ ಸುಮಾರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಬಂದಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ’ ಎಂದು ಹೇಳಿದರು.

ADVERTISEMENT

‘ಸದ್ಯಕ್ಕೆ ಐಸಿಯುನಲ್ಲಿದ್ದಾರೆ. ಆರೋಗ್ಯ ಈಗ ಸ್ಥಿರವಾಗಿದೆ. ಸುಸ್ತಾಗುತ್ತಿದೆ ಎಂದು ಹೇಳಿದ್ದಾರೆ. ಕೋವಿಡ್ ಮಾರ್ಗಸೂಚಿ ಪ್ರಕಾರ, ಮುಂದಿನ ನಾಲ್ಕೈದು ದಿನಗಳವರೆಗೆ ಆಸ್ಪತ್ತೆಯಲ್ಲೇ ಇರಬೇಕಾಗುತ್ತದೆ. ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.