ಬೆಳಗಾವಿ: ‘ನಾನು ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಕೆ.ಎಸ್.ಈಶ್ವರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆತರಲು ಯತ್ನಿಸುತ್ತಿದ್ದೇವೆ ಎಂಬುದು ಸುಳ್ಳು. ಈಶ್ವರಪ್ಪ ಅವರನ್ನು ಪಕ್ಷದಿಂದ ಹೊರಹಾಕಿದ್ದು ರಾಷ್ಟ್ರೀಯ ನಾಯಕರು. ಸೇರಿಸಿಕೊಳ್ಳಬೇಕಾದವರೂ ಅವರೇ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
‘ಈಶ್ವರಪ್ಪ ಅವರ ಬೆಂಗಳೂರು ನಿವಾಸದಲ್ಲಿ ನಾವೆಲ್ಲ ಸೇರಿದ್ದು ನಿಜ. ಆದರೆ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿಯ ಬೇಡಿಕೆ ಕುರಿತು ಚರ್ಚಿಸಿದ್ದೇವೆ. ಆ ಸಭೆಯಲ್ಲಿದ್ದ ಶಾಸಕ ರಾಜು ಗೌಡ ಅವರ ಹೇಳಿಕೆ ಬರೀ ಸುಳ್ಳು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಅದು ಬಿಜೆಪಿಯ ಭಿನ್ನಮತೀಯರ ಸಭೆಯೂ ಅಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ಕುರಿತು ರಾಜಕೀಯ ಚರ್ಚೆಯೂ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಬೀಳಿಸುವಂಥ ಯಾವುದೇ ಪ್ರಯತ್ನ ಕೂಡ ಮಾಡುತ್ತಿಲ್ಲ. ಬದಲಾಗಿ, ಮುಂದಿನ ಚುನಾವಣೆಯಲ್ಲಿ ಹೇಗೆ ಬಹುಮತ ಪಡೆಯಬೇಕು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ. ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಬೇಕಿಲ್ಲ. ನಮ್ಮ ಪ್ರಯತ್ನದ ಬಗ್ಗೆ ಮಾತ್ರ ಮಾತನಾಡುತ್ತೇವೆ’ ಎಂದೂ ಹೇಳಿದರು.
ತನಿಖೆಯ ಭಯ:
‘ಸಿಬಿಐಗೆ ಇದ್ದ ನೇರ ತನಿಖೆಯ ಅವಕಾಶವನ್ನು ರಾಜ್ಯ ಸರ್ಕಾರ ತಡೆದಿದೆ. ಈಗಾಗಲೇ ಡಿ.ಕೆ.ಶಿವಕುಮಾರ್ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದೆ. ಸಿದ್ದರಾಮಯ್ಯ ಪ್ರಕರಣವೂ ತನಿಖೆಗೆ ಹೋಗಬಹುದು ಎಂಬ ಭಯದಿಂದ ಹೀಗೆ ಮಾಡಿದ್ದಾರೆ. ತನಿಖಾ ಸಂಸ್ಥೆಯನ್ನೇ ವಿರೋಧಿಸುವ ಮಟ್ಟಿಗೆ ರಾಜ್ಯ ಸರ್ಕಾರ ಹಗರಣದಲ್ಲಿ ಸಿಕ್ಕಿಕೊಂಡಿದೆ ಎಂಬುದು ಈಗ ಜಗಜ್ಜಾಹೀರು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಎಳೆದು, ಕಾಂಗ್ರೆಸ್‌ಗೆ ಮುಜುಗರ ಮಾಡಿದವರು ಯಾರೆಂಬುದು ಗೊತ್ತಿದೆ. ಅದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.