ಬೆಳಗಾವಿ: ‘ಕೆಲವು ದಿನಗಳ ಹಿಂದೆ ಸಂತೋಷ್ ಪಾಟೀಲ ನನಗೆ ಕರೆ ಮಾಡಿದ್ದ. ಇವೆಲ್ಲವೂ ಅಕ್ರಮ ಕೆಲಸಗಳಿವೆ. ಟಿವಿಗಳ ಮುಂದೆ ಹೋಗಬೇಡ. ಆಗುವುದೂ ಇಲ್ಲ. ನಿನ್ನ ದುಡ್ಡನ್ನು ಪಡೆದುಕೊಳ್ಳುವುದರತ್ತ ನೋಡಿಕೋ ಎಂದು ತಿಳಿಸಿದ್ದೆ’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ ತಾಲ್ಲೂಕಿನ ಬಡಸ ಕೆ.ಎಚ್. ಗ್ರಾಮದಲ್ಲಿ ಸಂತೋಷ್ ಬಂಧುಗಳು ಹಾಗೂ ಬೆಂಬಲಿಗರ ಎದುರು ಗುರುವಾರ ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ನಾನೂ ಗೋಕಾಕದಲ್ಲಿ ಕಾರ್ಯಾದೇಶವಿಲ್ಲದೆ ಹತ್ಹತ್ತು ಕೋಟಿ ರೂಪಾಯಿ ಕೆಲಸ ಮಾಡಿಸ್ತೀನಿ. ಕೆಳಗಿನಿಂದ ಮೇಲಿನವರೆಗೂ ಹೋಗಬೇಕಾಗುತ್ತದೆ. ನಂತರ ಬಿಲ್ ಕೊಡುತ್ತಾರೆ. ಸಂತೋಷ್ ತನ್ನ ಮನೆ ಕೆಲಸವನ್ನೇನೂ ಮಾಡಿಕೊಂಡಿಲ್ಲ. ಜಾತ್ರೆ ವೇಳೆ ಗ್ರಾಮದ ಕೆಲಸ ಮಾಡಿದ್ದಾನೆ’ ಎಂದು ತಿಳಿಸಿದ್ದಾರೆ.
ವ್ಯವಸ್ಥೆ ಹೊಸದೇನಲ್ಲ:‘ಇಲಾಖೆಗಳ ಕಾರ್ಯಾದೇಶ ಪತ್ರ ಸಿಗುವ ಮೊದಲೇ ಅಥವಾ ಟೆಂಡರ್ ಕರೆಯದೆ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವ ವ್ಯವಸ್ಥೆ ಹೊಸದೇನಲ್ಲ. ಬಹುತೇಕ ಕ್ಷೇತ್ರಗಳಲ್ಲಿ ಹೀಗೆಯೇ ನಡೆಯುತ್ತದೆ’ ಎಂದಿದ್ದಾರೆ.
‘ಬೆಳಿಗ್ಗೆ 11ರ ನಂತರ ಅಂತ್ಯಕ್ರಿಯೆ ಎಂದುಕೊಂಡಿದ್ದೆ. ಬೇಗ ಮುಗಿಸಿ ಚಲೋ ಮಾಡಿದ್ರಿ. ಮೃತದೇಹ ಇಟ್ಟುಕೊಂಡರೆ ಏನೂ ಪ್ರಯೋಜನ ಆಗೋಲ್ಲ. ಅವರು (ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೇರಿದಂತೆ ಕಾಂಗ್ರೆಸ್‌ನವರು) ಎರಡು ದಿನ ಬರ್ತಾರೆ ಹೋಗ್ತಾರೆ. ಆಮೇಲೆ ನೀವೇ ಅನುಭವಿಸಬೇಕಾಗುತ್ತದೆ. ಎಲ್ಲವನ್ನೂ ಸರಿಪಡಿಸುತ್ತೇನೆ’ ಎಂದು ಬಂಧುಗಳಿಗೆ ಭರವಸೆ ನೀಡಿದ್ದಾರೆ.
‘ತಪ್ಪು ಮಾಡಿದ್ದರೆ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಲಿ. ಆದರೆ, ಆ ಆತ್ಮಹತ್ಯೆ ನಿರ್ಧಾರಕ್ಕೆ ಆತ ಬಂದಿದ್ದೇಕೆ ಎನ್ನುವುದೇ ಪ್ರಶ್ನೆ. ವಾರದ ಹಿಂದೆ, ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರಿಗೆ ಫೋನ್ ಮಾಡಿದ್ದನಂತೆ. ಸಾಹುಕಾರ್ (ನಾನು) ಮಂತ್ರಿ ಆಗುತ್ತಾರೆ. ಆಗ ಎಲ್ಲವೂ ಸರಿಯಾಗಲಿದೆ. ನನಗೇನು ಭಯ ಎಂದು ಖುಷಿಯಿಂದ ಹೇಳಿದ್ದನಂತೆ. ಅವನ ಸಾವು ಪ್ರಶ್ನೆಯಾಗಿಯೇ ಉಳಿದಿದೆ. ಪ್ರಕರಣದ ಸಮಗ್ರ ತನಿಖೆ ಆಗಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.