ADVERTISEMENT

ರಮೇಶ ಕತ್ತಿ ರಾಜೀನಾಮೆ: ರಾಜಕೀಯ ಧ್ರುವೀಕರಣಕ್ಕೆ ಕಾರಣವಾದ ‘ಬಿಡಿಸಿಸಿ’

ಲೋಕಸಭೆ ಚುನಾವಣೆಯಲ್ಲಿ ದುಷ್ಮನ್‌ ಆಗಿದ್ದವರೇ ಸಹಕಾರ ಕ್ಷೇತ್ರದಲ್ಲಿ ದೋಸ್ತಿಗಳು

ಸಂತೋಷ ಈ.ಚಿನಗುಡಿ
Published 5 ಅಕ್ಟೋಬರ್ 2024, 22:56 IST
Last Updated 5 ಅಕ್ಟೋಬರ್ 2024, 22:56 IST
ರಮೇಶ ಕತ್ತಿ
ರಮೇಶ ಕತ್ತಿ   

ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ರಮೇಶ ಕತ್ತಿ ರಾಜೀನಾಮೆ ನೀಡುವ ಮೂಲಕ, ಜಿಲ್ಲೆಯ ರಾಜಕಾರಣದಲ್ಲಿ ಮತ್ತೊಮ್ಮೆ ಧ್ರುವೀಕರಣ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬದ್ಧ ವೈರಿಗಳಾಗಿದ್ದವರು ಈಗ ದೋಸ್ತಿ ಆಗಿದ್ದರೆ; ಆಗ ಗೆಳೆಯರಾಗಿದ್ದವರು ಈಗ ವಿರೋಧಿಗಳು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ರಮೇಶ ಕತ್ತಿ ಪೈಪೋಟಿ ನಡೆಸಿದ್ದರು. ಇದೇ ಕ್ಷೇತ್ರದಿಂದ ಇಬ್ಬರೂ ಒಂದೊಂದು ಬಾರಿ ಸಂಸದರಾಗಿದ್ದಾರೆ. ಬಿಜೆಪಿ ಅಣ್ಣಾಸಾಹೇಬ ಅವರಿಗೆ ಅವಕಾಶ ನೀಡಿತು. ಮುನಿಸಿಕೊಂಡ ರಮೇಶ ಕತ್ತಿ ಪ್ರಚಾರದಿಂದ ದೂರ ಉಳಿದರು. ಪರೋಕ್ಷವಾಗಿ ಕಾಂಗ್ರೆಸ್‌ ಅಭ್ಯರ್ಥಿ, ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಗೆಲುವಿಗೆ ಕಾರಣವಾದರು ಎಂಬುದು ಅಣ್ಣಾಸಾಹೇಬ ಮನಸ್ತಾಪ.

‘ನನ್ನನ್ನು ಸೋಲಿಸಿದವರು ಹೇಗೆ ಅಧಿಕಾರದಲ್ಲಿ ಇರುತ್ತಾರೋ ನೋಡುತ್ತೇನೆ’ ಎಂದು ಅಣ್ಣಾಸಾಹೇಬ ಆಗ ಬಹಿರಂಗವಾಗಿ ತೊಡೆ ತಟ್ಟಿದ್ದರು. ಹೈ ಕಮಾಂಡ್‌ಗೂ ದೂರು ಸಲ್ಲಿಸಿದ್ದರು.

ADVERTISEMENT

‘ಲೋಕಸಭೆ ರಾಜಕಾರಣದ ಸೇಡನ್ನು ಅಣ್ಣಾಸಾಹೇಬ ಸಹಕಾರ ಕ್ಷೇತ್ರದಲ್ಲಿ ತೀರಿಸಿಕೊಂಡಿದ್ದಾರೆ. ‘ಸಂಗನಮತ’ ಮಾಡಿಕೊಂಡು ರಮೇಶ ಕತ್ತಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿದ್ದಾರೆ’ ಎಂಬುದು ಧುರೀಣರ ವಿಶ್ಲೇಷಣೆ.

ಆಗ ದುಷ್ಮನ್‌, ಈಗ ದೋಸ್ತ್:

ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ನಿಂದ ಪ್ರಿಯಾಂಕಾ ಜಾರಕಿಹೊಳಿ ಕಣಕ್ಕಿಳಿದ ಕಾರಣ, ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೇ ಬರಲಿಲ್ಲ. ‘ಇವರು ಪಕ್ಷಕ್ಕೆ ಹಾನಿ ಮಾಡಿ ಕುಟುಂಬ ಬೆಳೆಸಿದ್ದಾರೆ’ ಎಂದು ಅಣ್ಣಾಸಾಹೇಬ ದೂರಿದ್ದರು. ಅದಕ್ಕೂ ಮುನ್ನ ನಡೆದ ವಿಧಾನಸಭೆ ಚುನಾವಣೆಯಲ್ಲೂ ಶಶಿಕಲಾ ಜೊಲ್ಲೆ ಅವರಿಗೆ ಟಿಕೆಟ್‌ ತಪ್ಪಿಸಲು ರಮೇಶ ಜಾರಕಿಹೊಳಿ ಯತ್ನಿಸಿದ್ದರು ಎಂಬುದು ಅಣ್ಣಾಸಾಹೇಬ ಆರೋಪ. ಇದೇ ವಿಚಾರ ಎರಡೂ ಕುಟುಂಬಗಳ ಮಧ್ಯೆ ರಾಜಕೀಯ ವೈರತ್ವ ಬೆಳೆಸಿತ್ತು.

ಆದರೆ, ಈಗ ರಮೇಶ ಕತ್ತಿ ಅವರನ್ನು ಕೆಳಗಿಳಿಸಲು ಅದೇ ಅಣ್ಣಾಸಾಹೇಬ ಹಾಗೂ ಜಾರಕಿಹೊಳಿ ಸಹೋದರರು ಒಂದಾದರು.

ರಮೇಶ ಜಾರಕಿಹೊಳಿ

‘ಚಿಕ್ಕೋಡಿ, ನಿಪ್ಪಾಣಿ ಭಾಗದಲ್ಲಿ ಹೊಸ ಸದಸ್ಯರ ನೇಮಕದ ಬಗ್ಗೆ ಭಿನ್ನಾಭಿಪ್ರಾಯ ಎದ್ದವು. ಅದನ್ನು ಸರಿಪಡಿಸಿ ಎಂದು ಹಿರಿಯರಿಗೆ ಹೇಳಿದ್ದೆ. ಅವರು ಏನೂ ಮಾಡಲಿಲ್ಲ. ಬೇಸರವಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ. ನನ್ನನ್ನು ಕಿತ್ತೊಗೆಯುವ ತಾಕತ್ತು ಯಾರಿಗೂ ಇಲ್ಲ’ ಎಂದು ರಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ.

ಹೊಸ ಸದಸ್ಯರ ನೇಮಕಕ್ಕೆ ಅಣ್ಣಾಸಾಹೇಬ, ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸೇರಿ ಕೆಲ ನಿರ್ದೇಶಕರೂ ಪಟ್ಟು ಹಿಡಿದಿದ್ದಾರೆ. ಆದರೆ, ಸಚಿವ ಸತೀಶ ಜಾರಕಿಹೊಳಿ, ಪ್ರಭಾಕರ ಕೋರೆ ಅವರಂಥ ಹಿರಿಯ ನಾಯಕರು ಸಿದ್ಧರಿಲ್ಲ ಎಂದು ಮೂಲಗಳು ತಿಳಿಸಿವೆ.

ಲಕ್ಷ್ಮಣ ಸವದಿ
ಅಣ್ಣಾಸಾಹೇಬ ಜೊಲ್ಲೆ
ಜೊಲ್ಲೆಗೆ ಅಧ್ಯಕ್ಷ ಪಟ್ಟ?
ಅಕ್ಟೋಬರ್‌ 8ರಂದು ಬಿಡಿಸಿಸಿ ಬ್ಯಾಂಕ್‌ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಹಿರಿಯರಾದ ಶಾಸಕ ಲಕ್ಷ್ಮಣ ಸವದಿ ನೇತೃತ್ವ ವಹಿಸಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಸಾಹೇಬ ಅವರನ್ನೇ ಬಹುಪಾಲು ನಿರ್ದೇಶಕರು ಬೆಂಬಲಿಸಿದ್ದಾರೆ. 41 ವರ್ಷಗಳಿಂದ ನಿರ್ದೇಶಕರಾಗಿರುವ ರಮೇಶ ಕತ್ತಿ ಆರು ಬಾರಿ ಅಧ್ಯಕ್ಷರಾಗಿದ್ದಾರೆ. ದಶಕಗಳಿಂದಲೂ ಈ ಬ್ಯಾಂಕ್‌ ಕತ್ತಿ ಕುಟುಂಬದ ಹಿಡಿತದಲ್ಲೇ ಇತ್ತು. ಆ ಸ್ಥಾನಕ್ಕೆ ಈಗ ಅಣ್ಣಾಸಾಹೇಬ ಪಟ್ಟು ಹಿಡಿದಿದ್ದಾರೆ ಎನ್ನುತ್ತವೆ ಮೂಲಗಳು.
ಸಚಿವ ಸ್ಥಾನದಷ್ಟೇ ಪ್ರಬಲ
ಈ ಹುದ್ದೆ ಬಿಡಿಸಿಸಿ ಬ್ಯಾಂಕ್‌ ಸದ್ಯ ₹7894.96 ಕೋಟಿ ಠೇವಣಿ ₹7894.96 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹5230.74 ಕೋಟಿ ಸಾಲ ನೀಡಿದೆ. 40 ಲಕ್ಷ ರೈತರು ಇದನ್ನೇ ಅವಲಂಬಿಸಿದ್ದಾರೆ. ಬ್ಯಾಂಕ್‌ ಅಧ್ಯಕ್ಷ ಗಾದಿ ಯಾವುದೇ ಸಚಿವ ಸ್ಥಾನಕ್ಕೂ ಕಮ್ಮಿ ಇಲ್ಲ ಎನ್ನುವುದು ಜನಜನಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.