ADVERTISEMENT

ಬೆಳಗಾವಿ | ಸಮಸ್ಯೆ ಪರಿಹರಿಸಲು ರಮೇಶ ಕತ್ತಿ ‘ಪಂಚಾಯಿತಿ’

ಲಾಕ್‌ಡೌನ್‌ನಲ್ಲೂ ನಿಂತಿಲ್ಲ ಜನಸಂಪರ್ಕ

ಎನ್.ಪಿ.ಕೊಣ್ಣೂರ
Published 26 ಮೇ 2020, 19:45 IST
Last Updated 26 ಮೇ 2020, 19:45 IST
ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ತಮ್ಮ ಮನೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಜನರ ಸಮಸ್ಯೆ ಆಲಿಸಿದರು
ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ತಮ್ಮ ಮನೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಜನರ ಸಮಸ್ಯೆ ಆಲಿಸಿದರು   

ಹುಕ್ಕೇರಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಸಹಕಾರಿ ಧುರೀಣ, ಉದ್ಯಮಿ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ್ ಕತ್ತಿ ತಮ್ಮ ಮನೆಯ ಆವರಣದಲ್ಲಿ ‘ಪಂಚಾಯಿತಿ’ ನಡೆಸುವ ಮೂಲಕ ಮಾತುಕತೆಯಲ್ಲೇ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತಿರುವುದು ಗಮನಸೆಳೆಯುತ್ತಿದೆ.

ಮಾರಕ ಕೋವಿಡ್–19 ಲಾಕ್‌ಡೌನ್‌ ನಡುವೆಯೂ ಅಂತರ ಕಾಯ್ದುಕೊಂಡು ಅವರು ಪಂಚಾಯಿತಿ ಮುಂದುವರಿಸಿಕೊಂಡು ಬಂದಿದ್ದಾರೆ. ವಿವಿಧ ಹಳ್ಳಿಗಳ ಜನರು ಇವರಲ್ಲಿಗೆ ಬಂದು ಚರ್ಚಿಸುತ್ತಿರುತ್ತಾರೆ. ಮಾತಿನ ಚತುರತೆ ಹೊಂದಿರುವ ರಮೇಶ ಜನರ ಮನಸ್ಸನ್ನು ಬೇಗನೆ ಅರಿಯುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತಿದ್ದಾರೆ.

ಗ್ರಾಮದಲ್ಲಿ ಪ್ರತಿ ಮಂಗಳವಾರ ಮತ್ತು ಶನಿವಾರ ನಡೆಸುವ ಪಂಚಾಯಿತಿಯನ್ನು (ಪಂಚಕಿ– ತಂಟೆ, ತಕರಾರು ಬಿಡಿಸುವ, ಸಾರ್ವಜನಿಕ ಸಮಸ್ಯೆ ಬಗೆಹರಿಸುವ ವ್ಯವಸ್ಥೆ) ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಕೊರೊನಾ ಸಮಯದಲ್ಲಿ ಬಂದ್‌ ಆಗಬಹುದು ಎಂದು ಬಹುತೇಕ ಮಂದಿ ಭಾವಿಸಿದ್ದರು. ಆದರೆ, ನಿಲ್ಲಿಸಿಲ್ಲ. ಸಮಸ್ಯೆ ಹೊತ್ತುಕೊಂಡ ಬಂದ ಜನರಿಗೆ ಅಂತರ ಕಾಯ್ದುಕೊಳ್ಳಲು ಕುರ್ಚಿಯ ವ್ಯವಸ್ಥೆ ಮಾಡಿದ್ದಾರೆ. ಸಾನಿಟೈಸರ್ ನೀಡುತ್ತಾರೆ.

ADVERTISEMENT

ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ತಿಳಿಸುತ್ತಾರೆ. ಗ್ರಾಮ ಪಂಚಾಯಿತಿಯಿಂದ ಆಗಬೇಕಾದ ಕೆಲಸ, ಕ್ರಿಯಾ ಯೋಜನೆ, ರಸ್ತೆ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ, ಪಿಕೆಪಿಎಸ್ ಮೂಲಕ ಆಗಿರುವ ಪತ್ತು ನಿರ್ಮಾಣ ಸಮಸ್ಯೆ, ಸಾಲ ವಿತರಣೆ, ಜಮೀನು ತಂಟೆ, ವಿದ್ಯುತ್ ಸಮಸ್ಯೆ ಮೊದಲಾದ ಜನರ ಸಮಸ್ಯೆ ಆಲಿಸಿ ತಕ್ಷಣ ಸ್ಪಂದಿಸುತ್ತಿದ್ದಾರೆ. ಸಂಬಂಧಿಸಿದವರಿಗೆ ಫೋನ್ ಮೂಲಕ ತಿಳಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದಾರೆ.

‘ಅಧಿಕಾರ ಇಲ್ಲದಿದ್ದರೇನಂತೆ, ಜನಸೇವೆಗೆ ನಾನು ಸದಾ ಸಿದ್ಧವಿರುತ್ತೇನೆ. ಸೇವೆಯ ಆ ಕೆಲಸ ನಿಲ್ಲಿಸುವುದಿಲ್ಲ. ಸಮಸ್ಯೆ ಎಂದುಕೊಂಡು ನನ್ನ ಬಳಿಗೆ ಬರುವವರಿಗೆ ಕೈಲಾದ ಸಹಾಯ ಮಾಡುತ್ತೇನೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.