ADVERTISEMENT

ರಾಣಿ ಚನ್ನಮ್ಮ ಪ್ರತಿಮೆ ತೆರವು; ಕಣಬರ್ಗಿಯಲ್ಲಿ ಸುಖಾಂತ್ಯಗೊಂಡ ವಿವಾದ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 15:46 IST
Last Updated 10 ನವೆಂಬರ್ 2024, 15:46 IST
   

ಬೆಳಗಾವಿ: ಇಲ್ಲಿನ ಕಣಬರ್ಗಿಯ ಮುಖ್ಯ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆಯನ್ನು ಭಾನುವಾರ ತೆರವುಗೊಳಿಸಲಾಯಿತು.

ಬೆಳಗಾವಿಯಿಂದ ಕಣಬರ್ಗಿ ಪ್ರವೇಶಿಸುವಾಗ ಇರುವ ಮೊದಲ ವೃತ್ತಕ್ಕೆ ರಾಣಿ ಚನ್ನಮ್ಮನ ವೃತ್ತ ಎಂದು ಹೆಸರಿಡಲಾಗಿದೆ. ಇಲ್ಲಿ ಚನ್ನಮ್ಮನ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂಬ ಬೇಡಿಕೆಗೆ ಮಹಾನಗರ ಪಾಲಿಕೆ ಸ್ಪಂದಿಸದ ಕಾರಣ, ಅಲ್ಲಿನ ಕನ್ನಡಿಗ ಯುವಕರೇ ಫೈಬರ್‌ನಿಂದ ತಯಾರಿಸಿದ ಪ್ರತಿಮೆಯನ್ನು ನ.6ರಂದು ಪ್ರತಿಷ್ಠಾಪಿಸಿದ್ದರು.

ತಮ್ಮ ಅನುಮತಿ ಪಡೆಯದೆ ಪ್ರತಿಷ್ಠಾಪಿಸಿದ ಪ್ರತಿಮೆ ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳು ಸೂಚಿಸಿದ್ದರು. ಶುಕ್ರವಾರ ತಡರಾತ್ರಿ ಪೊಲೀಸರ ನೇತೃತ್ವದಲ್ಲಿ ತೆರವಿಗೆ ಮುಂದಾದಾಗ, ಗುಂಪಾಗಿ ಸೇರಿದ ಜನರು ಪ್ರತಿಮೆ ತೆರವಿಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ADVERTISEMENT

ಪ್ರತಿಮೆ ತೆರವು ವಿಚಾರ ಸ್ಥಳೀಯರು ಹಾಗೂ ಪೊಲೀಸರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿತ್ತು. ಶನಿವಾರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈಗ ಪ್ರತಿಮೆ ವಿವಾದ ಸುಖಾಂತ್ಯಗೊಂಡಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ.

ಸ್ವಯಂ ಪ್ರೇರಣೆಯಿಂದ ತೆರವು: ‘ಪಾಲಿಕೆಯಿಂದ ಅನುಮತಿ ಪಡೆದು, ಮುಂದಿನ ದಿನಗಳಲ್ಲಿ ಹೊಸ ಪ್ರತಿಮೆ ಪ್ರತಿಷ್ಠಾಪಿಸುವಂತೆ ನಿವಾಸಿಗಳಿಗೆ ಸೂಚಿಸಿದ್ದೇವೆ. ಇದಕ್ಕೆ ಒಪ್ಪಿಕೊಂಡು ಭಾನುವಾರ ಸ್ವಯಂಪ್ರೇರಣೆಯಿಂದ ಪ್ರತಿಮೆ ತೆರವುಗೊಳಿಸಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.