ADVERTISEMENT

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ | ಫಲಿತಾಂಶ ವಿಳಂಬ: ವಿದ್ಯಾರ್ಥಿಗಳಿಗೆ ಆತಂಕ

ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಹಲವು ಅಡಚಣೆ

ಇಮಾಮ್‌ಹುಸೇನ್‌ ಗೂಡುನವರ
Published 17 ನವೆಂಬರ್ 2023, 4:02 IST
Last Updated 17 ನವೆಂಬರ್ 2023, 4:02 IST
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೋಟ
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೋಟ   

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) ವ್ಯಾಪ್ತಿಯಲ್ಲಿ 2022–23ನೇ ಸಾಲಿನ ಶೈಕ್ಷಣಿಕ ಚಟುವಟಿಕೆ, ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಸ್ನಾತಕೋತ್ತರ ಮತ್ತು ಬಿ.ಇಡಿ ಕೋರ್ಸ್‌ ಪ್ರವೇಶಕ್ಕೆ ತೊಂದರೆ ಆಗುವ ಭೀತಿ ಅವರಲ್ಲಿ ಕಾಡುತ್ತಿದೆ.

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ 430ಕ್ಕೂ ಅಧಿಕ ಪದವಿ ಕಾಲೇಜುಗಳ 48,519 ವಿದ್ಯಾರ್ಥಿಗಳು 2023ರ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಅಂತಿಮ ಸೆಮಿಸ್ಟರ್‌ ಪರೀಕ್ಷೆ ಬರೆದಿದ್ದಾರೆ.

ಅವಕಾಶದಿಂದ ವಂಚಿತರಾಗುವ ಆತಂಕ: ‘ಮೈಸೂರು ವಿಶ್ವವಿದ್ಯಾಲಯ, ದಾವಣಗೆರೆ ವಿಶ್ವವಿದ್ಯಾಲಯ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 2023–24ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರಥಮ ವರ್ಷದ ಪ್ರವೇಶಕ್ಕೆ ಪ್ರಕ್ರಿಯೆ ಮುಗಿದಿದೆ. ಆರ್‌ಸಿಯುನಲ್ಲೂ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ನವೆಂಬರ್‌ 20 ಮತ್ತು ಬಿ.ಇಡಿ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ನವೆಂಬರ್‌ 29 ಕೊನೆಯ ದಿನ. ಫಲಿತಾಂಶ ಬೇಗ ಪ್ರಕಟವಾದರೆ, ಯಾವುದಾದರೂ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಇಲ್ಲದಿದ್ದರೆ ಅವಕಾಶದಿಂದ ವಂಚಿತರಾಗುತ್ತೇವೆ’ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ ತಿಳಿಸಿದರು.

ADVERTISEMENT

‘ಸ್ನಾತಕೋತ್ತರ ಮತ್ತು ಬಿ.ಇಡಿ ಕೋರ್ಸ್‌ಗಳ ಪ್ರವೇಶಕ್ಕೆ ಪದವಿ ಅಂಕಗಳನ್ನು ಪರಿಗಣಿಸಲಾಗುತ್ತದೆ. ಒಂದು ವೇಳೆ ತೃಪ್ತಿಕರ ಫಲಿತಾಂಶ ಬಾರದಿದ್ದರೆ, ಮರುಮೌಲ್ಯಮಾಪನದ ಮೊರೆ ಹೋಗಬೇಕು. ಈ ಎಲ್ಲಾ ಪ್ರಕ್ರಿಯೆ ಮುಗಿಯುವ ವೇಳೆಗೆ ವಿವಿಧ ಕೋರ್ಸ್‌ಗಳ ಪ್ರವೇಶ ದಿನಾಂಕ ಮುಗಿದಿರುತ್ತದೆ’ ಎಂದರು.

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಪತ್ರ ಬರೆದಿರುವ ವಿಷಯವನ್ನು ಆಯುಕ್ತರ ಗಮನಕ್ಕೆ ತರಲಾಗಿದೆ. ಅವರ ನಿರ್ದೇಶನದಂತೆ ಮುಂದುವರಿಯುತ್ತೇವೆ

–ಕೆ.ಎಸ್‌.ಲಕ್ಷ್ಮಿಪತಿ ಪ್ರಭಾರ ಜಂಟಿನಿರ್ದೇಶಕ ಕಾಲೇಜು ಶಿಕ್ಷಣ ಇಲಾಖೆ ಧಾರವಾಡ

ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವ ಅತಿಥಿ ಉಪನ್ಯಾಸಕರಿಗೆ ಗೌರವಧನ ಸಹಿತ 25 ದಿನಗಳ ವಿಶೇಷ ರಜೆ ನೀಡಬೇಕು. ಇಲ್ಲದಿದ್ದರೆ ಈ ಪ್ರಕ್ರಿಯೆಗೆ ಹಾಜರಾಗುವುದಿಲ್ಲ

–ರಾಜು ಕಂಬಾರ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ

ಬಾರದ ಮೌಲ್ಯಮಾಪಕರು; ನೆರವೇರದ ಪ್ರಕ್ರಿಯೆ

ಬೆಳಗಾವಿಯ ನಾಲ್ಕು ಕೇಂದ್ರಗಳಲ್ಲಿ ಪದವಿಯ 2 4 ಮತ್ತು 6ನೇ ಸೆಮಿಸ್ಟರ್‌ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ. ಆದರೆ 2023–24ನೇ ಸಾಲಿನ ಪದವಿ ತರಗತಿ ಈಗಾಗಲೇ ಆರಂಭಗೊಂಡಿರುವುದು ಮತ್ತು ಇತರೆ ಕಾರಣಗಳಿಂದ ಹಲವು ಮೌಲ್ಯಮಾಪಕರು ಈ ಪ್ರಕ್ರಿಯೆಗೇ ಹಾಜರಾಗಿಲ್ಲ. ‘ಯುಜಿಸಿ ಉಪನ್ಯಾಸಕರ ಜೊತೆ ಅತಿಥಿ ಉಪನ್ಯಾಸಕರನ್ನೂ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಿದ್ದೇವೆ. ನ.15ರವರೆಗೆ 927 ಮಂದಿ ಹಾಜರಾಗಿದ್ದಾರೆ. ವಿವಿಧ ಕಾರಣಗಳಿಂದ ಶೇ 50ರಷ್ಟು ಮೌಲ್ಯಮಾಪಕರು ಇನ್ನೂ ಹಾಜರಾಗಿಲ್ಲ. ಈ ತೊಡಕುಗಳನ್ನು ನಿವಾರಿಸಿ ತ್ವರಿತವಾಗಿ 6ನೇ ಸೆಮಿಸ್ಟರ್‌ ಫಲಿತಾಂಶ ಪ್ರಕಟಿಸಲು ಪ್ರಯತ್ನಿಸುತ್ತೇವೆ’ ಎಂದು ಆರ್‌ಸಿಯು ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಮೌಲ್ಯಮಾಪನಕ್ಕೆ ಬಂದರೆ ಸರ್ಕಾರ ಗೌರವಧನ ಕಡಿತಗೊಳಿಸುತ್ತದೆ. ಅದಕ್ಕೆ ಈಗಾಗಲೇ ಮೌಲ್ಯಮಾಪನಕ್ಕೆ ಹಾಜರಾದವರೂ ತಮ್ಮನ್ನು ಈ ಕೆಲಸದಿಂದ ಬಿಡುಗಡೆಗೊಳಿಸಲು ಕೋರಿದ್ದಾರೆ. ಇದರಿಂದ ಮೌಲ್ಯಮಾ‍ಪನಕ್ಕೆ ಹಿನ್ನಡೆಯಾಗುತ್ತಿದೆ. ಹಾಗಾಗಿ ಪರೀಕ್ಷಾ ಕಾರ್ಯಗಳಿಗಾಗಿ ಅತಿಥಿ ಉಪನ್ಯಾಸಕರಿಗೆ ಗೌರವಧನ ಸಹಿತವಾಗಿ 25 ದಿನಗಳ ವಿಶೇಷ ರಜೆ ನೀಡಬೇಕು. ಯುಜಿಸಿ ಉಪನ್ಯಾಸಕರು ಕಡ್ಡಾಯವಾಗಿ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಆದೇಶಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡದ ಜಂಟಿ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.