ಬೆಳಗಾವಿ: ‘ಜಿಲ್ಲೆಯಲ್ಲಿ ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತದಿಂದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 13 ಮಂದಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಮಹಿಳೆ ಸೇರಿದಂತೆ 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 2,086, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ 1,896, ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟ ಖಾನಾಪುರ ಮತ್ತು ಚನ್ನಮ್ಮನ ಕಿತ್ತೂರು ವಿಧಾನಸಭೆ ಕ್ಷೇತ್ರಗಳಲ್ಲಿ 542 ಸೇರಿದಂತೆ ಜಿಲ್ಲೆಯಾದ್ಯಂತ 4,524 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲಿಯೂ ಗೊಂದಲಕ್ಕೆ ಆಸ್ಪದ ಕೊಡದಂತೆ ಕ್ರಮ ವಹಿಸಲಾಗಿದೆ. ಶೇ.70ರಷ್ಟು ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ’ ಎಂದರು.
‘ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಈಗ ಯಾವುದೇ ರಾಜಕೀಯ ಪಕ್ಷದವರು ಪ್ರಚಾರ ನಡೆಸುವಂತಿಲ್ಲ. ಪ್ರಚಾರಕ್ಕಾಗಿ ಬೇರೆ ಕ್ಷೇತ್ರಗಳಿಂದ ಬಂದಿರುವ ರಾಜಕೀಯ ಪಕ್ಷಗಳ ನಾಯಕರು, ಈಗಿರುವ ಕ್ಷೇತ್ರ ತೊರೆಯಬೇಕು ಎಂದು ಸೂಚಿಸಲಾಗಿದೆ. ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮಂಗಳವಾರ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಈ ಪ್ರಕ್ರಿಯೆಗೆ 24 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಪೈಕಿ 10 ಸಾವಿರ ಮಂದಿ ಭದ್ರತಾ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದು ತಿಳಿಸಿದರು.
‘ಮತಗಟ್ಟೆಗಳಲ್ಲಿ ಬಿಸಿಲಿನ ತಾಪ ನೀಗಿಸಲು ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರ್‍ಯಾಂಪ್, ಶುದ್ಧ ಕುಡಿಯುವ ನೀರು, ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಗೃಹ ಒದಗಿಸಲಾಗಿದೆ. ಶುಶ್ರೂಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿದ್ದು, ವೈದ್ಯಕೀಯ ಕಿಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆ ಮತ್ತು ತಾಲ್ಲೂಕು ಹಂತಗಳಲ್ಲಿ ತುರ್ತು ಸಂದರ್ಭ ಆಂಬುಲೆನ್ಸ್ ಸೇವೆ ಲಭ್ಯವಿರಲಿದೆ’ ಎಂದರು.
‘ಸರ್ಕಾರಿ ನೌಕರರು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವಂತಿಲ್ಲ. ಯಾರಾದರೂ ಪ್ರಚಾರ ಮಾಡುತ್ತಿರುವುದು ಕಂಡುಬಂದರೆ, ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಪಕ್ಷಾತೀತ ಕೆಲಸ’
‘ನಾವು ಯಾರ ಒತ್ತಡಕ್ಕೂ ಮಣಿಯದೆ, ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ದೂರು ದಾಖಲಾದರೂ ಪರಿಶೀಲಿಸಿ, ಪುರಾವೆಗಳನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ನಿತೇಶ್ ಪಾಟೀಲ ಹೇಳಿದರು.
‘ಎಲ್ಲ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಒಂದುವೇಳೆ ನಮ್ಮ ವಿರುದ್ಧ ಯಾವುದೇ ದೂರುಗಳಿದ್ದರೆ, ಚುನಾವಣಾ ಆಯೋಗಕ್ಕೆ ಸಲ್ಲಿಸಲು ಮುಕ್ತ ಅವಕಾಶವಿದೆ’ ಎಂದರು.
‘ಜಿಲ್ಲಾ ಮತ್ತು ನಗರ ವ್ಯಾಪ್ತಿಯಲ್ಲಿ ಮತದಾರರಿಗೆ ಹಣ ಹಂಚಿಕೆ ಆರೋಪಕ್ಕೆ ಸಂಬಂಧಿಸಿ, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತದಾರರಿಗೆ ಬೆದರಿಕೆ ಭಾಷಣ ಮಾಡಿದ್ದಕ್ಕಾಗಿ, ನ್ಯಾಯಾಲಯದಿಂದ ಅನುಮತಿ ಪಡೆದು ಶಾಸಕ ಭರಮಗೌಡ ಕಾಗೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.
ಹಣ ಹಂಚಿಕೆ: ಎಫ್‌ಐಆರ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ‘ಗೋಕಾಕ ತಾಲ್ಲೂಕಿನ ಅಂಕಲಗಿಯಲ್ಲಿ ಶನಿವಾರ ನಡೆದ ಹಣ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಮೂರು ಪ್ರಕರಣ ದಾಖಲಾಗಿವೆ. ಈ ಪೈಕಿ ಕಾಂಗ್ರೆಸ್ ವಿರುದ್ಧ ಎರಡು, ಬಿಜೆಪಿ ವಿರುದ್ಧ ಒಂದು ದಾಖಲಾಗಿದೆ. ಬಿಜೆಪಿಯವರು ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ವಿರುದ್ಧವೂ ದೂರು ನೀಡಿದ್ದಾರೆ. ಬಿಜೆಪಿ ನೀಡಿದ ದೂರು ಆಧರಿಸಿ ಪರಿಶೀಲಿಸಿದಾಗ, ಮನೆಯೊಂದರಲ್ಲಿ ₹1.76 ಲಕ್ಷ ನಗದು ಪತ್ತೆಯಾಗಿದೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದ ಕಾರಿನಲ್ಲಿ ಏನೂ ಪತ್ತೆಯಾಗಿಲ್ಲ’ ಎಂದರು.
‘ಬಿಜೆಪಿ ಕಾರ್ಯಕರ್ತರು ನಮ್ಮ ಹಲ್ಲೆ ನಡೆಸಿ, ನಗದು, ಚಿನ್ನಾಭರಣ ದೋಚಿದ್ದಾರೆ ಎಂದು ಕಾಂಗ್ರೆಸ್‌ನವರು ದೂರು ದಾಖಲಿಸಿದ್ದಾರೆ’ ಎಂದರು.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ‘ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚಿಕೆ ಮಾಡಿದ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನವರನ್ನು ಅಪಹರಿಸಿ ಹಲ್ಲೆ ಮಾಡಿದ ಪ್ರಕರಣ ಸಂಬಂಧ ದೂರು ಹಾಗೂ ಪ್ರತಿದೂರು ದಾಖಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.