ADVERTISEMENT

ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ಇನ್ಸುಲಿನ್‌ ನೀಡಿ ಹೃದಯಾಘಾತಕ್ಕೆ ಯತ್ನ

ಸಂತೋಷ ಈ.ಚಿನಗುಡಿ
Published 25 ಅಕ್ಟೋಬರ್ 2024, 7:10 IST
Last Updated 25 ಅಕ್ಟೋಬರ್ 2024, 7:10 IST
ಸಂತೋಷ ಪದ್ಮಣ್ಣವರ
ಸಂತೋಷ ಪದ್ಮಣ್ಣವರ   

ಬೆಳಗಾವಿ: ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣದಲ್ಲಿ ಮತ್ತೊಂದು ರಹಸ್ಯ ಬಯಲಾಗಿದೆ. ಆರೋಪಿಗಳು ಇನ್ಸುಲಿನ್‌ ಚುಚ್ಚುಮದ್ದು ನೀಡಿ ಕೊಲೆಗೆ ಯತ್ನಿಸಿದ ವಿಷಯ ವಿಚಾರಣೆ ವೇಳೆ ಗೊತ್ತಾಗಿದೆ.

ಕೊಲೆಯ ನಾಲ್ಕನೇ ಆರೋಪಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಮಂಜುನಾಥ ಜೇರಕಲ್ ಎಂಬಾತ ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ಸಂತೋಷ ಅವರು ರಾತ್ರಿ ಊಟದ ವೇಳೆ ಅಂಬಲಿ ಕುಡಿದಿದ್ದರು. ಪತ್ನಿ ಉಮಾ ಅಂಬಲಿಯಲ್ಲಿ ನಿದ್ರೆ ಮಾತ್ರೆ ಹಾಕಿದ್ದರು. ಸಂತೋಷ ಗಾಢನಿದ್ರೆಗೆ ಜಾರಿದ ಬಳಿಕ ಇನ್ಸುಲಿನ್‌ ಕೊಡುವ ಉಪಾಯ ಮಾಡಿದ್ದರು. ಇದರಿಂದ ಸಂತೋಷ ಅವರ ದೇಹದಲ್ಲಿನ ಸಕ್ಕರೆ ಅಂಶ ಕುಸಿದು, ಹೃದಯಾಘಾತ ಆಗುವುದೆಂದು ಭಾವಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇನ್ಸುಲಿನ್ ಕೊಡಲು ಮುಂದಾದಾಗ ಸಂತೋಷ ಒದ್ದಾಡಿದ್ದರು. ಅದರಿಂದ ಬೆಚ್ಚಿಬಿದ್ದ ಆರೋಪಿಗಳು ಮತ್ತೊಂದು ಉಪಾಯಕ್ಕೆ ಮುಂದಾದರು. ಉದ್ಯಮಿ ಗಾಢನಿದ್ರೆಗೆ ಜಾರುವವರೆಗೂ ಕಾದರು. ಮುಖದ ಮೇಲೆ ತಲೆದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದರು ಎಂದೂ ತಿಳಿಸಲಾಗಿದೆ.

ಅಕ್ಟೋಬರ್‌ 9ರಂದು ಸಂತೋಷ ಮೃತಪಟ್ಟರು. ಹೃದಯಾಘಾತದಿಂದ ಸಾವಾಗಿದೆ ಎಂದು ಪತ್ನಿ ಉಮಾ ಸಂಬಂಧಿಕರಿಗೆ ತಿಳಿಸಿದ್ದರು. 10ರಂದು ಅವರ ಅಂತ್ಯಕ್ರಿಯೆ ಕೂಡ ಮಾಡಿದ್ದರು. ಆದರೆ, ಸಂತೋಷ ಪುತ್ರಿ ಸಂಜನಾ ಅನುಮಾನಗೊಂಡು ಸಿಸಿಟಿವಿ ಕ್ಯಾಮೆರಾಗಳನ್ನು ನೋಡಲು ಮುಂದಾದಾಗ ಪ್ರಕರಣ ಬೆಳಕಿಗೆ ಬಂತು. ಅಕ್ಟೋಬರ್ 9ರ ರಾತ್ರಿ ಸಿಸಿಟಿವಿ ಫುಟೇಜ್‌ಗಳು ಡಿಲಿಟ್‌ ಆಗಿದ್ದರಿಂದ ಸಂಜನಾ ಅನುಮಾನಪಟ್ಟರು. ತಾಯಿ ವಿರುದ್ಧವೇ ದೂರು ಸಲ್ಲಿಸಿದರು.

ಉದ್ಯಮಿಯ ಪತ್ನಿ ಉಮಾ (41), ಅವರ ಫೇಸ್‌ಬುಕ್‌ ಸ್ನೇಹಿತ, ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದ ಶೋಭಿತ್‌ ಗೌಡ (30) ಮತ್ತು ಪವನ್‌ (27) ಅವರನ್ನು ಬಂಧಿಸಲಾಗಿತ್ತು. ಮೊದಲು ಬಂಧಿಸಲಾಗಿತ್ತು. ನಂತರ ಮಂಜುನಾಥ ಬಸಪ್ಪ ಜೇರಕಲ (31) ಬಂಧನವಾಗಿತ್ತು.

ಉಮಾ ಪದ್ಮಣ್ಣವರ

ಇನ್ನೂ ಕಾಡುವ ಪ್ರಶ್ನೆಗಳು

ಸಂತೋಷ ಪದ್ಮಣ್ಣವರ ಸಾವಿನ ನಂತರ ಆಸ್ಪತ್ರೆಯೊಂದಕ್ಕೆ ನೇತ್ರ ದಾನ ಮಾಡಲಾಗಿದೆ. ಆತ್ಮಹತ್ಯೆ ಕೊಲೆ ಪ್ರಕರಣಗಳಲ್ಲಿ ಅಥವಾ ಅನುಮಾನಾಸ್ಪದವಾಗಿ ಸತ್ತರೆ ಈ ರೀತಿ ನೇತ್ರದಾನ ಪಡೆಯುವುದಿಲ್ಲ. ಆದರೆ ಸಂತೋಷ ಸಾವು ಸಹಜ ಎಂದು ಪರಿಗಣಿಸಿ ನೇತ್ರ ಪಡೆಯಲಾಗಿದೆ. ಈ ರೀತಿ ಸಹಜ ಸಾವು ಎಂದು ಪ್ರಮಾಣೀಕರಿಸಿದವರು ಯಾರು ಎಂಬ ಪ್ರಶ್ನೆ ಇನ್ನೂ ಕಾಡುತ್ತಿದೆ. ಅಲ್ಲದೇ ಅ.16ರಂದು ಸಂತೋಷ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದು ಅದರ ವರದಿ ಇನ್ನೂ ಬಂದಿಲ್ಲ. ಹೀಗಾಗಿ ಸಾವಿನ ಬಗ್ಗೆ ಇನ್ನಿಲ್ಲದ ತರ್ಕಗಳು ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.